CT Ravi: ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ ಎಂದ ಸಿ.ಟಿ.ರವಿ

ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವೇದನೆ ಕಳೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದ್ದಾರೆ.

ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸರ್ಕಾರ, ಸಚಿವರಿಗೆ ಜನರ ಸಂಕಷ್ಟಕ್ಕಿಂತ ಚುನಾವಣೆಯ ಪ್ರತಿಷ್ಠೆಯೇ ದೊಡ್ಡದಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಮುಳುಗಿದ್ದಾರೆಯೇ ಹೊರತು ಜನರ ಸಂಕಷ್ಟ ಕೇಳುವ ಸಂವೇದನೆ ಅವರಿಗೆ ಇರಲಿಲ್ಲ ಎಂದು ಆರೋಪಿಸಿದರು.

ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ? ಜನ ನಮ್ಮ ಬಗ್ಗೆ ಏನು ಅಂದುಕೊಳ್ತಾರೆ ಎಂದು ಅನಿಸಲಿಲ್ಲವೇ? ಎಂದು ಕೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೇ ಈ ಪತ್ರ ಬರೆದಿದ್ದಾರೆ ಎಂದು ಪ್ರಶ್ನಿಸಿದರು.

ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಮನೆ, ಜಾನುವಾರು ಕಳಕೊಂಡಿದ್ದಾರೆ. ಅನೇಕರು ಜೀವ ಕಳಕೊಂಡು ಸಂಕಷ್ಟದಲ್ಲಿದ್ದಾರೆ. ಈಗಲಾದರೂ ಸಂವೇದನೆ ತೋರಿಸಿ ಎಂದು ಆಗ್ರಹಿಸಿದರು. ರೈತರ ಸಂಕಷ್ಟಕ್ಕಿಂತ ಅವರಿಗೆ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬುದೇ ಮುಖ್ಯವಾಗಿದೆ. ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ; ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ರೈತರ, ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಒತ್ತಾಯಿಸಿದರು.‌

ಇದು ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎನ್ನುವ ಕಾಲವೇ ಎಂದು ಕೇಳಿದ ಅವರು, ನಿಮಗೆ ಏನಾಗಿದೆ? ಇನ್ನು ಎರಡೂವರೆ ವರ್ಷ ನಾನೇ ಸಿಎಂ ಎನ್ನುತ್ತಾರೆ. 5 ವರ್ಷ ನಿಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಭ್ರಷ್ಟಾಚಾರ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು. 

Rakesh arundi

Leave a Reply

Your email address will not be published. Required fields are marked *