Congress-govt: ಸಿದ್ದರಾಮಯ್ಯ ಸರ್ಕಾರದಲ್ಲಿ ಕಮಿಷನ್‌ ದುಪ್ಪಟ್ಟು: ಸಿಎಂಗೆ ಗುತ್ತಿಗೆದಾರರರಿಂದ ಪತ್ರ

ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ನಿಮ್ಮ ನೇತೃತ್ವದ ಸರ್ಕಾರದಲ್ಲಿ ಬಿಲ್‌ ಪಾವತಿಗೆ ಕಮಿಷನ್‌ ದುಪ್ಪಟ್ಟಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ, ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದೆ.

ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್‌ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್‌ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ನೇತೃತ್ವದ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್ ಪಡೆಯುತ್ತಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್‌ನಲ್ಲಿ ಆರೋಪಿಸಿತ್ತು. ಆಗ ಮುಖ್ಯಮಂತ್ರಿಯವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಏಪ್ರಿಲ್‌ನಲ್ಲಿ ಶೇ 50ರಷ್ಟು ಬಾಕಿ ಬಿಲ್ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.

ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘವು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರ್ಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಆ‌ರ್. ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *