Murder: ಮದುವೆಯಾದ 5 ತಿಂಗಳಿಗೇ ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ
ಪತಿಯೇ ಪತ್ನಿಯನ್ನು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದೆ. ನೇತ್ರಾವತಿ ಸಕಲೇಶಪುರ ನವೀನ್ ಜೊತೆ ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲ ದಿನಗಳಲ್ಲಿ ಗಂಡನಿಂದ ದೂರವಾದ ನೇತ್ರಾವತಿ, ತನ್ನ ಹವ್ವಳ್ಳಿ ಗ್ರಾಮದ ತವರು ಮನೆ ಸೇರಿದ್ದರು.
ನವೀನ್, ನೇತ್ರಾವತಿಯ ನಡುವೆ ಜಗಳ ಆಗಿದ್ದು, ಕುಟುಂಬದವರು ರಾಜಿ ಮಾಡಲು ಪ್ರಯತ್ನ ಮಾಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಗಂಡನಿಂದ ಸಂಪೂರ್ಣ ದೂರವಾಗಲು ನಿರ್ಧರಿಸಿದ್ದ ನೇತ್ರಾವತಿ ವಿಚ್ಛೇದನ ನೀಡಲು ಸಿದ್ದತೆ ನಡೆಸಿದ್ದರು. ಅಲ್ಲದೇ ಮೂರು ದಿನಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ವಿಚ್ಛೇದನ ನೀಡಲು ಮುಂದಾಗಿದ್ದು ಅಲ್ಲದೇ ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದ ಪತಿ ನವೀನ್ ಕೋಪಗೊಂಡು ಪತ್ನಿ ನೇತ್ರಾವತಿಯ ಪ್ರಾಣವನ್ನೇ ತೆಗೆದಿದ್ದಾನೆ.
—-