Flood Relief: ಅತಿವೃಷ್ಟಿ: ಕರ್ನಾಟಕಕ್ಕೆ 384 ಕೋಟಿ ಬಿಡುಗಡೆ ಮಾಡಿದ ಕೇಂದ್ರ
ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವಾಲಯವು ಎಸ್‌ಡಿಆರ್‌ಎಫ್‌ನಿಂದ 2ನೇ ಕಂತಿನ 384 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.
ನೈಋತ್ಯ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು 1,950 ಕೋಟಿ ಮುಂಗಡೆಯಾಗಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕಕ್ಕೆ ಕೇವಲ 384.40 ಕೋಟಿ ರೂ.ಸಿಕ್ಕಿದ್ದರೆ, ಮಹಾರಾಷ್ಟ್ರಕ್ಕೆ ಬರೋಬ್ಬರಿ 1,566.40 ಕೋಟಿ ರೂ. ನೀಡಲಾಗಿದೆ.
ಈ ವರ್ಷ, ಕೇಂದ್ರವು ಈಗಾಗಲೇ ಎಸ್‌ಡಿಆರ್‌ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ 13,603.20 ಕೋಟಿ ರೂ. ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ 15 ರಾಜ್ಯಗಳಿಗೆ 2,189.28 ಕೋಟಿ ರೂ. ಬಿಡುಗಡೆ ಮಾಡಿದೆ.
ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.