Vijay: ಕಾಲ್ತುಳಿತ ಪ್ರಕರಣ: ವಿಜಯ್ ಆಪ್ತರ ವಿರುದ್ಧ ಹತ್ಯೆ ಕೇಸ್
ತಮಿಳಿಗ ವೆಟ್ರಿ ಕಳಗಂ ಚುನಾವಣಾ ರ್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಸಂಬಂಧ ಪಕ್ಷದ ಅಧ್ಯಕ್ಷ ವಿಜಯ್ ಆಪ್ತರ ವಿರುದ್ಧ ಹತ್ಯೆ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಆನಂದ್, ಜಂಟಿ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸೇರಿ ನಾಲ್ವರ ವಿರುದ್ದ ಕರೂರ್ ಜಿಲ್ಲಾ ಪೊಲೀಸರು ಬಿಎನ್ಎಸ್ನ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 40ಕ್ಕೆ ಏರಿಕೆಯಾಗಿದೆ. ರ್ಯಾಲಿಯಲ್ಲಿ ಕಲ್ಲು ತೂರಾಟ ನಡೆದಿದೆ ಎಂಬುದು ಸುಳ್ಳು, ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಎಂದು ಎಡಿಜಿಪಿ ಡೇವಿಡ್ಸನ್ ಹೇಳಿದ್ದಾರೆ.
ಮುಲಾಜಿಲ್ಲದೇ ಕ್ರಮ
ಕರೂರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ ಸಿಎಂ ಎಂ.ಕೆ.ಸ್ಟಾಲಿನ್, “ಇದೊಂದು ಘೋರ ದುರಂತ. ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಲಾಗಿದೆ. ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು,” ಎಂದರು.
32 ಲಕ್ಷ ರೂ. ಪರಿಹಾರ
ಕಾಲ್ತುಳಿತ ದುರಂತಕ್ಕೆ ಕಂಬನಿ ಮಿಡಿದಿರುವ ವಿಜಯ್, ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯ ಸರಕಾರ ತಲಾ 10 ಲಕ್ಷ ರೂ. ಹಾಗೂ ಪ್ರಧಾನಿ ಕಾರ್ಯಾಲಯ 2 ಲಕ್ಷ ರೂ. ಪರಿಹಾರ ಘೋಷಿಸಿದೆ.
ಸಿಬಿಐ ತನಿಖೆಗೆ ಆಗ್ರಹ
ಕಾಲ್ತುಳಿತ ಪ್ರಕರಣ ಪಿತೂರಿ ಎಂದು ಆರೋಪಿಸಿರುವ ಟಿವಿಕೆ, ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.