B.K Hariprasad: ಜಾತಿ ಗಣತಿಯಲ್ಲಿ ಮಾಹಿತಿ ನೀಡಲು ಸುಧಾ ಮೂರ್ತಿ ದಂಪತಿ ನಕಾರ: ಬಿ.ಕೆ.ಹರಿಪ್ರಸಾದ್​ ಕಿಡಿ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದು ಸ್ವಯಂ ದೃಢೀಕರಣ ಪತ್ರ ನೀಡಿರುವ ಸುಧಾ ಮೂರ್ತಿ ದಂಪತಿ ವಿರುದ್ಧ ಪರಿಷತ್​ ಕಾಂಗ್ರೆಸ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಈ ಸಂಬಂಧ ಸಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬಿ.ಕೆ.ಹರಿಪ್ರಸಾದ್ ಪೋಸ್ಟ್ ಹಾಕಿದ್ದಾರೆ. ಪೋಸ್ಟ್ ನಲ್ಲಿ ‘ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ’ ಎಂದು ವಾಗ್ದಾಳಿ ನಡೆಸಿದ್ದಾರೆ.

ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲುಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ.

ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ, ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ದಟತನದ ಪರಮಾವಧಿ ಎಂದು ಆರೋಪ ಮಾಡಿದ್ದಾರೆ.

ಸರಳತೆ ಶ್ರೀಮಂತಿಕೆಯನ್ನ ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ…!

Rakesh arundi

Leave a Reply

Your email address will not be published. Required fields are marked *