DK Shivakumar: ಡಿಸಿಎಂ ಡಿಕೆ ಶಿವಕುಮಾರ್ ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ!
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ಬೆಳ್ಳಂಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್ಗೆ ಬಂದ ಡಿಸಿಎಂ ಡಿಕೆಶಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸಂವಾದ ನಡೆಸಿದರು. ಈ ವೇಳೆ ಆಗಮಿಸಿದ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ಹೈಡ್ರಾಮಾ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಇಂದು ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ ವಾಕಿಂಗ್ ನಡೆಸಿ ಜನರ ಅಹವಾಲು ಸ್ವೀಕರಿಸಿದ್ದರು. ನಂತರ ಸಂವಾದ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಮುನಿರತ್ನ ಜನರ ನಡುವೆಯೇ ಕುಳಿತಿದ್ದರು. ಆರ್ಎಸ್ಎಸ್ ಕಾರ್ಯಕ್ರಮ ಮುಗಿಸಿ ಮುನಿರತ್ನ ಅವರೇ ಡಿಕೆಶಿ ಇದ್ದ ಪಾರ್ಕ್ಗೆ ಬಂದಿದ್ದರು. ಇದನ್ನ ಕಂಡು ಡಿಕೆಶಿ “ಕರಿ ಟೋಪಿ ಶಾಸಕರೇ ಬನ್ನಿ ಮೇಲೆ” ಎಂದು ಕರೆದಿದ್ದಾರೆ. ಬಳಿಕ ವೇದಿಕೆ ಮೇಲೆ ಬಂದ ಮುನಿರತ್ನ ಅವರು ಡಿಸಿಎಂ ಕೈಯಲ್ಲಿದ್ದ ಮೈಕ್ ಕೇಳಿದ್ದಾರೆ. ಡಿಕೆಶಿ ಅವರು ಆಮೇಲೆ ಕೊಡುತ್ತಿನಿ ಎಂದು ಹೇಳಿದ್ದಾರೆ. ಆದರೆ ಮುನಿರತ್ನ ಡಿಕೆ ಶಿವಕುಮಾರ್ ಕೈಯಲ್ಲಿದ್ದ ಮೈಕ್ ಅನ್ನು ಕಿತ್ತುಕೊಳ್ಳಲು ಮುಂದಾಗಿ ರಂಪಾಟವನ್ನೇ ಮಾಡಿದ್ದಾರೆ.
ವೇದಿಕೆ ಮೇಲೆ ಬರುತ್ತಿದ್ದಂತೆ ಮಾತನಾಡಿದ ಶಾಸಕ ಮುನಿರತ್ನ, ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೂ ಸ್ಥಳೀಯ ಶಾಸಕನಾಗಿರುವ ನನಗೆ ಆಹ್ವಾನ ನೀಡಿಲ್ಲ. ಈ ಭಾಗದ ಸಂಸದ ಮಂಜುನಾಥ್ ಅವರಿಗೂ ಆಹ್ವಾನ ನೀಡಿಲ್ಲ. ಸರ್ಕಾರದ ಕಾರ್ಯಕ್ರಮಕ್ಕೆ ಸಂಸದರು, ಶಾಸಕರಿಗೆ ಆಹ್ವಾನ ನೀಡದಿರುವುದು ತಪ್ಪು. ಕಾರ್ಯಕ್ರಮದಲ್ಲಿ ಸಂಸದ, ಶಾಸಕರ ಫೋಟೋ ಇಲ್ಲ. ಇದು ಸಾರ್ವಜನಿಕ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮ ಎಂದು ಮುನಿರತ್ನ ಆರೋಪಿಸಿ, ಗಲಾಟೆ ಮಾಡಿದ್ದಾರೆ. ಈ ವೇಳೆ ಮುನಿರತ್ನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವೇದಿಕೆ ಮೇಲೆಯೇ ತಳ್ಳಾಟ ನೂಕಾಟ ಕೂಡ ನಡೆದಿದೆ.
ವೇದಿಕೆಯಲ್ಲೇ ಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು. ಈ ವೇಳೆ ಮೈಕ್ ಆಫ್ ಮಾಡಿ ಮುನಿರತ್ನ ಕೈಯಿಂದ ಮೈಕ್ ಕಿತ್ತುಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ನಂತರ ಮೈಕ್ ಕಿತ್ತುಕೊಂಡು ಅವನನ್ನ ಹೊರಗೆ ಕಳಿಸಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೈಡ್ರಾಮಾ ಮಾಡಿದ ಮುನಿರತ್ನ ಅವರ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರೇಪಿಸ್ಟ್ ಮುನಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದುಕೊಂಡು ಹೋಗಿದ್ದಾರೆ.
ಈ ಕುರಿತು ಮಾತಾಡಿದ ಡಿಕೆ ಶಿವಕುಮಾರ್, ಇವರದ್ದು ಬರೀ ರಾಜಕೀಯನೇ ಆಯ್ತು ಬಿಡಿ, ಇದು ಜನರ ಸಮಸ್ಯೆ ಕೇಳುವ ಕಾರ್ಯಕ್ರಮ. ಇದೆಲ್ಲಾ ಮಾಮೂಲಿ ಕುಳಿತುಕೊಳ್ಳಿ, ತಲೆ ಕೆಡಿಸ್ಕೋಬೇಡಿ ಅಂತ ಅಧಿಕಾರಿಗಳಿಗೆ, ಜನರಿಗೆ ಹೇಳಿದ ಡಿಕೆಶಿ ಹೇಳಿದ್ದಾರೆ.