Tent accident dead: ಟೆಂಟ್ ಗೆ ನುಗ್ಗಿದ ಬೈಕ್ : ಇಬ್ಬರ ದುರ್ಮರಣ
ಪುಟ್ಬಾತ್ ಮೇಲೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಮೇಲೆ ಬೈಕ್ ಹರಿದು ಬೈಕ್ ಸವಾರ ಹಾಗೂ ಟೆಂಟ್ ನಲ್ಲಿ ವಾಸವಾಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಸಾಗರ ರಸ್ತೆಯ ಮಲ್ನಾಡು ಗೇಟ್ವೇ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದೆ.
ಫುಟ್ ಪಾತ್ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ವ್ಯಾಪಾರ ಮಾಡಿಕೊಂಡಿದ್ದ ದುರ್ಗಾ ಪ್ರಸಾದ್ ಎಂಬುವರು ಟೆಂಟ್ ಹಾಕಿಕೊಂಡು ನಾಲ್ಕು ವರ್ಷದಿಂದ ಕುಟುಂಬದ ಜೊತೆ ಇಲ್ಲೇ ವಾಸವಾಗಿದ್ದರು. ಆಯನೂರು ಗೇಟ್ ಕಡೆಯಿಂದ ಕೆಎ 14 ಈ ವೈ 1306 ಕ್ರಮ ಸಂಖ್ಯೆಯ ಬೈಕ್ ನಲ್ಲಿ ಬಂದ ಮೂವರು ಫುಟ್ಪಾತ್ ನಲ್ಲಿದ್ದ ಟೆಂಟ್ ಗೆ ಡಿಕ್ಕಿ ಹೊಡೆದಿದ್ದಾರೆ .
ಟೆಂಟ್ ನಲ್ಲಿ ದುರ್ಗಾ ಪ್ರಸಾದ್ ಅವರ ತಂದೆ ನಾಗಯ್ಯ, ತಾಯಿ ಕಾಮೇಶ್ವರಿ ಹಾಗೂ ತಂಗಿ ಜ್ಯೋತಿ ಇದ್ದರು. ಕಾಮೇಶ್ವರಿ ಸ್ಥಳದಲ್ಲೇ ಸಾವಿಗೀಡಾದರು. ದುರ್ಗಾ ಪ್ರಸಾದ್ ಮೂತ್ರ ವಿಸರ್ಜನೆಗೆಂದು ಬೆಳಗಿನ ಜಾವ ಐದು ಇಪ್ಪತ್ತಕ್ಕೆ ಟೆಂಟ್ ನಿಂದ ಹೊರ ಬಂದಾಗ ಈ ಘಟನೆ ನಡೆದಿದ್ದು ಅವರು ಪಾರಾಗಿದ್ದಾರೆ.
ಸುದರ್ಶನ್ ಬೈಕ್ ಚಲಾಯಿಸುತ್ತಿದ್ದು ಆತನ ಹಿಂದೆ ಆಕಾಶ ಎಂಬವನು ಕುಳಿತಿದ್ದನು. ಆಕಾಶನಿಗೆ ತೀವ್ರವಾಗಿ ಗಾಯಗಳಾಗಿದ್ದು, ಆತನನ್ನು ಮೆಗನ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳಿಸುವಾಗಲೇ ಮೃತಪಟ್ಟಿದ್ದಾನೆ. ತಲೆಗೆ ಹೊಡೆತ ಬಿದ್ದಿದ್ದ ಕಾರಣ ಕಾಮೇಶ್ವರಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.