Bharath kumdel:ಭರತ್ ಕುಂಬ್ಡೇಲ್ ಕೋರ್ಟ್‌ಗೆ ಶರಣು. ಏನಿದು ಕೋಕಾ ಆಕ್ಟ್..!ಕೋರ್ಟ್ ಸುತ್ತ ಭದ್ರತೆ. ಭರತ್ ಕುಂಬ್ಡೇಲ್ ವಿರುದ್ಧ ಕಠಿಣ ಕ್ರಮ.?
ಇಡೀ ಮಂಗಳೂರನ್ನೆ ಬೆಚ್ಚಿ ಬೀಳಿಸಿದ್ದ ಅಬ್ದುಲ್ ರಹಿಮಾನ್ ಘಟನೆ. ಯಾರಿಗೆ ತಾನೆ ಮರೆಯಲು ಸಾಧ್ಯ. ಅವ್ರ ಮನೆಯೇ ಮುಂಭಾಗವೇ ಕೊಚ್ಚಿ ನೆತ್ತರು ಹರಿಸಲಾಗಿತ್ತು. ಬಂಟ್ವಾಳ ಸಮೀಪ ಮುಸ್ಲಿಂ ಯುವಕನನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹತ್ಯೆಗೈಯ್ಯಲಾದಂತ ಘಟನೆ. ಮೇ 27 ರಂದು ಕುರ್ಯಾಲ್ ಗ್ರಾಮದ ಎರಕೋಡಿ ಪ್ರದೇಶದಲ್ಲಿ ರಹಿಮಾನ್ ಮತ್ತು ಅವರ 29 ವರ್ಷದ ಸಹೋದ್ಯೋಗಿ ಕಲಂದರ್ ಶಫಿಯನ್ನು ಮನೆಮುಂದೆ ಜಲ್ಲಿಕಲ್ಲು ಇಳಿಸುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕತ್ತಿಯಿಂದ ಹಲ್ಲೆ ನಡೆಸಿದ್ರು. ರಹಿಮಾನ್ ಸ್ಥಳದಲ್ಲೇ ಸಾವಿಗೀಡಾದರೆ, ಶಫಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡ್ತಿದ್ದಾನೆ. ಈ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಭರತ್ ಕುಂಬ್ಡೇಲ್ ಬಂಧನಕ್ಕೆ ಆಗ್ರಹ ಕೇಳಿ ಬಂದಿತ್ತು.ಭರತ್ ಕುಂಬ್ಡೇಲ್ ಅಶ್ರಫ್ ಕಲಾಯಿ ಹಾಗೂ ಅಬ್ದುಲ್ ರಹಿಮಾನ್ ಕೃತ್ಯಗಳಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿ.
ಬೆಂಜನ ಪದವಿಯಲ್ಲಿ 2017 ರಲ್ಲಿ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದ ಅಶ್ರಫ್ ಕಲಾಯಿಯ ಜೀವ ತೆಗೆದ ಪ್ರಕರಣ ಹಾಗೂ ಕೆಲವು ತಿಂಗಳ ಹಿಂದಷ್ಟೆ ಬಂಟ್ವಾಳದ ಸಮೀಪ ನಡೆದಂತ ಅಬ್ದುಲ್ ರಹಿಮಾನ್ ಕೃತ್ಯಗಳೆರಡರಲ್ಲೂ ಕುಂಬ್ಡೇಲ್ ಆರೋಪಿಯಾಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಅಶ್ರಫ್ ಕೇಸ್‌ನಲ್ಲಿ ಈಗಾಗ್ಲೇ ಚಾರ್ಜ್ ಶೀಟ್ ಆಗಿದ್ದು ಈ ಕೇಸ್‌ನಾ ವಿಚಾರಣೆ ಕೋರ್ಟ್‌ನಲ್ಲಿ ನಡೀತಾ ಇದೆ. ಇನ್ನು ಅಬ್ದುಲ್ ರಹಿಮಾನ್ ಪ್ರಕರಣದ ನಂತ್ರ ಕೋರ್ಟ್‌ಗೆ ಹಾಜರಾಗದೆ ಭರತ್ ಕುಂಬ್ಡೇಲ್ ತಲೆಮರೆಸಿಕೊಂಡಿದ್ದ. ಹಾಗಾಗಿ ಭರತ್ ಕುಂಬ್ಡೇಲ್ ಮೇಲೆ ಕೋಕಾ ವಾರೆಂಟ್ ದಾಖಲು ಮಾಡಲಾಗಿತ್ತು. ಅಬ್ದುಲ್ ರಹಿಮಾನ್ ಕೇಸ್‌ನಲ್ಲಿರೋ ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡದ ಎಸ್‌ಪಿ ಅರುಣ್ ಕೋಕಾ ಕೇಸ್ ದಾಖಲು ಮಾಡಿದ್ರು. ಇದೀಗ ಅಶ್ರಫ್ ಕೇಸ್‌ನಲ್ಲೂ ವಾರೆಂಟ್ ಹಾಗೂ ಹೆಚ್ಚುವರಿಯಾಗಿ ಕೋಕಾ ಕೇಸ್ ಬಿದ್ದ ಹಿನನೆಲೆಯಲ್ಲಿ ಭರತ್ ಕುಂಬ್ಡೇಲ್ ಶುಕ್ರವಾರ ಸಂಜೆ ಜಿಲ್ಲಾ ಕೋರ್ಟ್ ಬಂದು ಶರಣಾಗಿದ್ದಾನ್.ಅಶ್ರಫ್ ಕೇಸ್‌ನಲ್ಲಿ ಬಂಧಿತನಾಗಿದ್ದ ಭರತ್ ಕುಂಬ್ಡೇಲ್ ಜಾಮೀನು ಪಡೆದ ಬಳಿಕ ಕೋರ್ಟ್‌ಗೆ ಸರಿಯಾಗಿ ಹಾಜರಾಗದೆ ಅನೇಕ ಬಾರಿಯೂ ತಪ್ಪಿಸಿಕೊಂಡಿದ್ದಾನೆ.
ಇತ್ತ ಭರತ್ ಕುಂಬ್ಡೇಲ್ ಶರಣಾದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೂಡ ಕಲ್ಪಿಸಲಾಗಿದೆ.ಶರಣಾಗಿರೋ ಮಾಹಿತಿ ಸಿಗ್ತಾ ಇದ್ದಂತೆ ಕೋರ್ಟ್ ಆವರಣ ಸುತ್ತ ಮುತ್ತ ಭಾರೀ ಬಂದೋಬಸ್ತ್ ಹಾಕಲಾಗಿದೆ.ಕುಂಬ್ಡೇಲ್ ವಿರುದ್ಧವಾಗಿ ಈಗಾಗ್ಲೇ ಅನೇಕ ಪೊಲೀಸ್ ಠಾಣೆಗಳಲ್ಲಿ ನಾನಾ ಕೇಸ್‌ಗಳಿರೋದ್ರಿಂದ ಆರೋಪಿಯನ್ನು ರಕ್ಷಣೆ ಮಾಡೋ ಜವಾಬ್ದಾರಿ ಪೊಲೀಸರ ಹೆಗಲೇರಿದೆ. ಇತ್ತ ಈತನ ವಿರುದ್ಧವಾಗಿಯೂ ಕತ್ತಿ ಮಸೆಯುತ್ತಿರೋದ್ರಿಂದ ಭರತ್ ಕುಂಬ್ಡೇಲ್‌ಗೂ ಕೂಡ ಪ್ರಾಣಾಪಾಯದ ಬೆದರಿಕೆ ಕೂಡ ಇದೆ. ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸ್ತಾ ಇದ್ದಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳ ಒತ್ತಡದ ನಡುವೆ ಈಗ ಭರತ್ ಕುಂಬ್ಡೇಲ್ ಶರಣಾಗಿದ್ದಾನೆ.
ಗ್ಯಾಂಗ್ ವಾರ್ ನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಹತ್ಯೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಸ್ಲಿಂ ಯುವಕರ ಹತ್ಯಾ ಯತ್ನ ನಡೆದಿತ್ತು. ಮಾತ್ರವಲ್ಲದೆ ಸಂಘಪರಿವಾರದ ನಾಯಕರಾದ ಭರತ್ ಕುಮ್ಡೇಲ್, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಹತ್ಯೆಗೆ ಪ್ರತೀಕಾರ ನಡೆಸುತ್ತೇವೆ ಎಂದು ಬಹಿರಂಗವಾಗಿ ಉಗ್ರ ಭಾಷಣ ಬಿಗಿದು ಮುಸ್ಲಿಂ ಯುವಕರ ಹತ್ಯೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಪೋಲಿಸ್ ಇಲಾಖೆ ಹಾಗೂ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಿ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದರಿಂದ ಕೊಳ್ತಮಜಲುವಿನಲ್ಲಿ ಮುಸ್ಲಿಂ ಯುವಕನ ಹತ್ಯೆಯಾಗಿದೆ. ಇದಕ್ಕೆ ಅಶ್ರಫ್ ಕಲಾಯಿ ಹಂತಕ ಭರತ್ ಕುಮ್ಡೇಲ್ ನೇರ ಕೈವಾಡ ಇದೆ ಹಾಗೂ ಆತನೇ ಸೂತ್ರಧಾರನಾಗಿದ್ದಾನೆಂದು ಪೋಲಿಸ್ ಇಲಾಖೆಗೆ ತಿಳಿದಿದ್ದರೂ ಈತನಕ ಈ ನರ ಹಂತಕನ ಬಂಧನವಾಗಿಲ್ಲ. ನಾಳೆ ಸಂಜೆಯೊಳಗಾಗಿ ಈತನ ಬಂಧನವಾಗದಿದ್ದಲ್ಲಿ ಎಸ್ಪಿ ಕಛೇರಿ ಚಲೋ ಸೇರಿದಂತೆ ಜಿಲ್ಲಾಧ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಎಸ್‌ಡಿಪಿಐ ನಡೆಸಲಿದೆ ಎಂದು ಮೂನಿಷ್ ಅಲಿ ಎಚ್ಚರಿಕೆ ನೀಡಿದ್ದನ್ನು ನಾವಿಲ್ಲಿ ಗಮನಿಸಬೇಕಾಗಿದೆ.
ಕೋಕಾ ಕಾಯ್ದೆ ಎಂದರೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಆಗಿದೆ. ಇದನ್ನು ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ನಿಯಂತ್ರಿಸಲು 2000ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯ ಅಡಿಯಲ್ಲಿ, ಪದೇಪದೇ ಅಪರಾಧಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ, ಮತ್ತು ಅವರಿಗೆ ಕನಿಷ್ಠ ಒಂದು ವರ್ಷದವರೆಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ
• ಜಾಮೀನು:
ಈ ಕಾಯ್ದೆಯ ಅಡಿಯಲ್ಲಿ ಬಂಧಿತರಾದವರಿಗೆ ಕನಿಷ್ಠ ಒಂದು ವರ್ಷದವರೆಗೆ ಜಾಮೀನು ಪಡೆಯಲು ಸಾಧ್ಯವಿಲ್ಲ.
• ಕಠಿಣ ಶಿಕ್ಷೆ:
ಕೋಕಾ ಕಾಯ್ದೆ ಸಾಮಾನ್ಯ ಐಪಿಸಿ ಕಾಯ್ದೆಗಿಂತ ಕಠಿಣವಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ.
• ಆಸ್ತಿ ಮುಟ್ಟುಗೋಲು:
ಕಾಯ್ದೆಯ ತಿದ್ದುಪಡಿಗಳ ಪ್ರಕಾರ, ಆರೋಪಿಗಳ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕುವ ಅವಕಾಶವಿದೆ.
• ತನಿಖಾ ಅವಧಿ:
ಆರೋಪಪಟ್ಟಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ಅಶ್ರಫ್ ಕೃತ್ಯ:- ಘಟನೆ ಹಿನ್ನೆಲೆ
2017 ಜೂನ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜಿನಪದವು ಗ್ರಾಮದಲ್ಲಿ ಆಟೋ ಚಾಲಕ ಮಹಮ್ಮದ್ ಅಶ್ರಫ್ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅಶ್ರಫ್ ಅಮ್ಮುಂಜೆ ಗ್ರಾಮದ ಎಸ್ಡಿಪಿಐ ಪಕ್ಷದ ಅಧ್ಯಕ್ಷರಾಗಿದ್ದರು. ಆಟೋ ಚಾಲಕರೂ ಆಗಿದ್ದರು. ಪಕ್ಷದ ಧ್ವಜ ಸಂಸ್ಥಾಪನ ದಿನದಲ್ಲಿ ಪಾಲ್ಗೊಂಡ ಬಳಿಕ ವಾಡಿಕೆಯಂತೆ ಶೀನಪ್ಪ ಪೂಜಾರಿ ಎಂಬುವವರ ಜೊತೆ ಬೆಂಬನಪದವಿಗೆ ಆಟೋ ಬಾಡಿಗೆಗೆ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳ ತಂಡ ಅಶ್ರಫ್ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು.
ದಿವ್ಯರಾಜ್ ಮತ್ತು ಭರತ್ ಕುಮ್ಡೇಲು ಪ್ರಕರಣದ ಪ್ರಮುಖ ಕೊಲೆ ಆರೋಪಿಗಳು. ಅಶ್ರಫ್ ಕಲಾಯಿ ಹತ್ಯೆಗೆ ಪ್ರತೀಕಾರವಾಗಿ 2017 ಜುಲೈ 04ರಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಾಡಿವಾಳ ಹತ್ಯೆ ಮಾಡಲಾಗಿತ್ತು.
ಅಬ್ದುಲ್ ರಹಿಮಾನ್ ಎಂತ ಹುಡುಗ:-
ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಪಿಕಪ್ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮದುವೆಯಾಗಿ ಎರಡು ಮಕ್ಕಳು ಇರೋ ರಹೀಂ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ, ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ.ಅಮಾಯಕನಾಗಿರೋ ವ್ಯಕ್ತಿಯನ್ನ ಹತ್ಯೆ ಮಾಡಲಾಗಿದೆ ಎಂದು ನೋವು ಹೊರ ಹಾಕಲಾಗಿತ್ತು.
ಭರತ್ ಕುಮ್ಡೇಲ್ ವಿರುದ್ಧ ದಾಖಲಾಗಿರುವ ಪ್ರಮುಖ ಪ್ರಕರಣಗಳು:
ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಭರತ್ ಕುಮ್ಡೇಲ್ ವಿರುದ್ಧ ಬಂಟ್ವಾಳ ಮತ್ತು ಪುತ್ತೂರು ವ್ಯಾಪ್ತಿಯಲ್ಲಿ ಈ ಹಿಂದೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೆಲವು ಮುಖ್ಯವಾದವುಗಳು ಹೀಗಿವೆ:
- ಕೊಲೆ ಪ್ರಕರಣ: ಬಂಟ್ವಾಳ ನಗರ ಠಾಣೆಯಲ್ಲಿ 2017ರಲ್ಲಿ ಅಶ್ರಫ್ ಕಲಾಯಿ ಕೊಲೆ ಮತ್ತು ಸಂಬಂಧಿತ ಕೃತ್ಯಗಳ ಪ್ರಕರಣ.
- ಕೊಲೆ ಯತ್ನ ಮತ್ತು ಹಲ್ಲೆ: ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 2012, 2015, ಮತ್ತು 2017ರಲ್ಲಿ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳು.
- ಹಲ್ಲೆ ಮತ್ತು ಜೀವಬೆದರಿಕೆ: 2006ರಿಂದ 2013ರ ಅವಧಿಯಲ್ಲಿ ಹಲ್ಲೆ, ಮಾರಕಾಯುಧಗಳಿಂದ ಗಾಯಗೊಳಿಸುವುದು, ಜೀವ ಬೆದರಿಕೆ, ಜಮೀನು ಅತಿಕ್ರಮಣ, ಮತ್ತು ಗಲಭೆ ಸಂಬಂಧಿತ ಹಲವು ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿವೆ.
- ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ: ಉಪ್ಪಿನಂಗಡಿ ಠಾಣೆಯಲ್ಲಿ 2023ರಲ್ಲಿ ಜಮೀನು ಅತಿಕ್ರಮಣ, ಹಲ್ಲೆ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
- ಕಾನೂನು ಉಲ್ಲಂಘನೆ: ಇತ್ತೀಚೆಗೆ ಬಂಟ್ವಾಳ ನಗರ ಮತ್ತು ಪುತ್ತೂರು ನಗರ ಠಾಣೆಗಳಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ (BNS) ಅಡಿಯಲ್ಲಿಯೂ ಎರಡು ಪ್ರಕರಣಗಳು ದಾಖಲಾಗಿವೆ