Physical abuse: ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಸುನೀಲ್ ಅಮಾನತು
ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ರನ್ನು ಅಮಾನತು ಮಾಡಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇನ್ಸ್ಪೆಕ್ಟರ್ ಸುನೀಲ್ ಹಾಗೂ ಸಹಾಯಕ ಉಪನಿರೀಕ್ಷಕ (ಎಎಸ್ಐ) ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯು ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಇನ್ಸ್ಪೆಕ್ಟರ್ ಸುನೀಲ್ ವಿರುದ್ಧ ಕೆಲವು ದಿನಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಡಿಜಿ ಕಚೇರಿಗೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮನೆ ಕೊಡುಸ್ತಿನಿ, ರಿಜಿಸ್ಟರ್ ಮ್ಯಾರೇಜ್ ಆಗ್ತೀನಿ, ಬ್ಯೂಟಿ ಪಾರ್ಲರ್ ಕೊಡಿಸುವುದಾಗಿ ಹೇಳಿ ತಮ್ಮ ಮನೆ ಹಾಗೂ ಹೋಟೆಲ್ ಗೆ ಕರೆಸಿ ಅತ್ಯಾಚಾರವೆಸಗಿದ್ದಾರೆ. ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ನಮ್ಮ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.