Darshan: ದರ್ಶನ್ಗೆ ಸವಲತ್ತು ನೀಡದ ಆರೋಪ: ಮಹತ್ವದ ಆದೇಶ ನೀಡದ ಕೋರ್ಟ್..!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ಕನಿಷ್ಠ ಸವಲತ್ತುಗಳನ್ನು ಕೂಡ ನೀಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶರೇ ಖುದ್ದಾಗಿ ಜೈಲಿಗೆ ಭೇಟಿ ನೀಡಿ ತಮಗೆ ನೀಡಿರುವ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ನಟ ದರ್ಶನ್ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯ ಬಗ್ಗೆ ಇಂದು 57ನೇ ಸಿಸಿಎಚ್ ಕೋರ್ಟ್ ನ ಇನ್ ಚಾರ್ಜ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಆದೇಶ ನೀಡಿದ್ದಾರೆ.
ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಜಡ್ಜ್ ಸೂಚಿಸಿದ್ದಾರೆ. ನಟ ದರ್ಶನ್ ಪರ ವಕೀಲ ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು ಎಂದು ಸೂಚಿಸಿದೆ.
‘ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಅಕ್ಟೋಬರ್ 18ರೊಳಗೆ ಭೇಟಿ ನೀಡಿ ವರದಿ ನೀಡಬೇಕು’ ಎಂದು ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚನೆ ನೀಡಿದೆ.