Belagavi: ಸಮುದ್ರಕ್ಕೆ ಇಳಿದ ಒಂದೇ ಕುಟುಂಬದ ಮೂವರು ಸಾವು, ನಾಲ್ವರು ನಾಪತ್ತೆ
ದಸರಾ ರಜೆ ಕಳೆಯಲು ಸಮುದ್ರಕ್ಕೆ ಪ್ರವಾಸ ಹೋಗಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಿಂಧುದುರ್ಗ ಜಿಲ್ಲೆಯ ಅರೇಬಿಯನ್ ಸಮುದ್ರದಲ್ಲಿ ನಡೆದಿದೆ. ಅವರೊಂದಿಗೆ ಸಮುದ್ರಕ್ಕೆ ಇಳಿದಿದ್ದ ಇತರ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ರಾರ್ ಕಿತ್ತೂರ (17) ಇಬಾದ್ ಕಿತ್ತೂರ (13) ಅಳ್ನಾವರ ಮೂಲದ ನಮೀರಾ ಅಕ್ತರ್ (16) ಮೃತ ದುರ್ದೈವಿಗಳು, ಲೋಂಡಾದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆ ರಕ್ಷಣೆ ಮಾಡಲಾಗಿದ್ದು, ಮಹಾರಾಷ್ಟ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಇರ್ಫಾನ್ ಕಿತ್ತೂರ (36) ಇಕ್ವಾನ್ ಕಿತ್ತೂರ (15 ಮಹಾರಾಷ್ಟ್ರ ಮೂಲದ ಪರಯಾನ್ ಮನಿಯರ್ (20) ಜಾಕಿರ್ ಮನಿಯರ್ (13) ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ವಿಪತ್ತು ನಿರ್ವಹಣಾ ತಂಡ, ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ.
ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ 8 ಜನರ ಕುಟುಂಬವೊಂದು ಪಿಕ್ನಿಕ್ಗೆ ಹೋಗಿದ್ದಾಗ – ಶಿರೋಡಾ- ವೇಲಗರ್ ಬೀಚ್ನಲ್ಲಿ ಈ ದುರ್ಘಟನೆ ನಡೆದಿದೆ. ಅವರಲ್ಲಿ ಇಬ್ಬರು ಕುಡಾಲ್ (ಸಿಂಧುದುರ್ಗ) ಮೂಲದವರಾಗಿದ್ದರೆ, ಇತರ 6 ಮಂದಿ ಬೆಳಗಾವಿಯಿಂದ ಆಗಮಿಸಿದ್ದರು. ಕುಟುಂಬದ 8 ಮಂದಿಯೂ ಈಜಲು ಸಮುದ್ರಕ್ಕೆ ಇಳಿದಿದ್ದು ಸ್ವಲ್ಪ ಸಮಯದ ನಂತರ ನೀರಿನ ಆಳ ಗೊತ್ತಾಗದೆ ಅವರು ಮುಳುಗಲು ಪ್ರಾರಂಭಿಸಿದರು.
ಈ ವಿಷಯ ತಿಳಿದ ನಂತರ ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧದ ಸಮಯದಲ್ಲಿ 3 ಶವಗಳು ಪತ್ತೆಯಾಗಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ.