Belagavi: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಒಳಪಡಿಸಿ: ಹಕ್ಕಿಪಿಕ್ಕಿಗಳಿಂದ ಪ್ರತಿಭಟನೆ
ರಾಜ್ಯಾದ್ಯಂತ ಸೆಪ್ಟೆಂಬರ್ 22 ರಿಂದ ಆರಂಭವಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹಕ್ಕಿಪಿಕ್ಕಿ ಆದಿವಾಸಿಗಳನ್ನು ಹೊರಗಿಟ್ಟಿರುವುದಾಗಿ ಆರೋಪ ಕೇಳಿಬಂದಿದೆ. ನಾವೂ ಮನುಷ್ಯರೇ, ನಮ್ಮನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ತಮ್ಮ ಸಾಂಪ್ರದಾಯಿಕ ವೇಷದಲ್ಲಿ ಪ್ರತಿಭಟನೆ ನಡೆಸಿದರು.
ಹಕ್ಕಿಪಿಕ್ಕಿ ಸಮುದಾಯ ಬೆಳಗಾವಿಯ ಖಾನಾಪುರ, ಮಾಡಿಗುಂಜಿ, ಹಲಕರ್ಣಿ, ಲೋಂಡಾ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಗುಡಿಸಲು ಹಾಗೂ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದು, ವಿದ್ಯುತ್ ಸಂಪರ್ಕವಿರುವ ಮನೆಗಳಿಗೆ ಮಾತ್ರ ಸ್ಟಿಕರ್ ಅಂಟಲಾಗಿದೆ ಎಂದು ದೂರಿದರು. ಅಲ್ಲದೇ ನಮಗೂ ಕೂಡ ಮನೆ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಮೂಲಭೂತ ಸೌಲಭ್ಯಗಳು ಸರ್ಕಾರದಿಂದ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ನಾಯಕ ರಾಜಶೇಖರ ಹಿಂಡಲಗಿ ಮಾತನಾಡಿ, 79 ವರ್ಷಗಳ ಬಳಿಕವೂ ಹಕ್ಕಿಪಿಕ್ಕಿಗಳಿಗೆ ಗುರುತಿನ ಚೀಟಿ ಇಲ್ಲ , ಮೂಲಭೂತ ಸೌಲಭ್ಯಗಳು ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರತಿಕ್ರಿಯಿಸಿ, ಸಮುದಾಯದವರನ್ನು ಒಟ್ಟುಗೂಡಿಸಿ ಆಫ್‌ಲೈನ್ ಮೊ ಡ್‌ನಲ್ಲಿ ಜಿಯೋ ಟ್ಯಾಗ್ ಮಾಡಿ ಸಮೀಕ್ಷೆ ನಡೆಸಲು ಮತ್ತು ಆಧಾರ್ ಸಮಸ್ಯೆ ಪರಿಹರಿಸಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.