Banu Mushtaq dasara: ಚಾಮುಂಡೇಶ್ವರಿ ಆರತಿ ಪಡೆದು ಟೀಕಾಕಾರರ ಬಾಯಿಮುಚ್ಚಿಸಿದ ಬಾನು ಮುಷ್ತಾಕ್
ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಚಾಲನೆ ನೀಡಿದರು.
ಬಾನು ಮುಷ್ತಾಕ್ ಅವರು ಕೇಸರಿ ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ತಲೆಯಲ್ಲಿ ಮಲ್ಲಿಗೆ ಹೂ ಮೂಡಿದು ಬಂದಿದ್ದರು. ಸಿಎಂ ಸಿದ್ದರಾಮಯ್ಯ ಜತೆ ಚಾಮುಂಡೇಶ್ವರಿ ದರ್ಶನ ಪಡೆದ ಅವರು ಆರತಿ ತೆಗೆದುಕೊಳ್ಳುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದರು.
ದಸರಾ ಉದ್ಘಾಟನೆಗೆ ಬಾನು ಅವರ ಆಯ್ಕೆಯನ್ನು ಬಿಜೆಪಿ ಪ್ರಶ್ನೆ ಮಾಡಿತ್ತು. ಅಲ್ಲದೇ ಚಾಮುಂಡಿ ಸನ್ನಿಧಿಗೆ ಹೋಗುವ ಅವರು ಮಂಗಳಾರತಿ ತಗೋತಾರ? ಕೈಮುಗಿತಾರ ಅಂತಾ ಬಿಜೆಪಿ ಹೇಳಿತ್ತು. ಆದರೆ ಮುಷ್ತಾಕ್ ಅವರು ಚಾಮುಂಡೇಶ್ವರಿಗೆ ಕೈಮುಗಿದು, ಮಂಗಳಾರತಿ ತೆಗೆದುಕೊಂಡು ಭಾವುಕರಾದರು.
ದಸರಾ ಉದ್ಘಾಟಿಸಿ ಮಾತನಾಡಿದ ಬಾನು ಮುಷ್ತಾಕ್ ಪ್ರೀತಿಯ ಸಮಾಜ ಕಟ್ಟೋಣ, ಎಲ್ಲರಿಗೂ ಸಮಪಾಲು ಸಮಬಾಳು ಇರಲಿ. ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ಇವತ್ತು ಪುಷ್ಪಾರ್ಚನೆ ಮಾಡಿದೇವೆ. ಮಂಗಳಾರತಿ ಸ್ವೀಕರಿಸಿದ್ದೇವೆ. ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗಲಿದೆ ಎಂದರು.
ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ, ಭೂಮಿ ಯಾರನ್ನೂ ಹೊರ ತಳ್ಳಲ್ಲ. ಸಂಸ್ಕೃತಿ ನಮ್ಮ ಬೇರು, ಸೌಹಾರ್ದ ನಮ್ಮ ಶಕ್ತಿ. ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ಆಹ್ವಾನ ನೀಡಿ ನೈತಿಕ ಬೆಂಬಲ ಕೊಟ್ಟ ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದರು.
ಮೈಸೂರು ದಸರಾ ಶಾಂತಿಯ ಹಬ್ಬ. ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧವು ಐಕ್ಯತೆ ಆಗಲಿ. ದಸರಾ ಕೇವಲ ಮೈಸೂರು, ನಮ್ಮ ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೆ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಹಾರೈಸಿದರು.
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿಶೇಷವಾಗಿ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.