Mysore Dasara Banu Mushtaq: ಮೈಸೂರು ದಸರಾಗೆ ಬಾನು ಮುಷ್ತಾಕ್ ಚಾಲನೆ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೊಂಡಿದೆ. ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ 11 ದಿನಗಳ ದಸರಾ ಮಹೋತ್ಸವಕ್ಕೆ ಸಾಹಿತಿ ಬಾನು ಮುಷ್ತಾಕ್ ಚಾಲನೆ ನೀಡಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದಲ್ಲಿ ಈಡುಗಾಯಿ ಒಡೆದರು. ಅರ್ಚಕರು ಪೂಜೆ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ಅವರಿಗೆ ಹೂವಿನ ಹಾರ ನೀಡಿ ಸನ್ಮಾನಿಸಿದರು. ಈ ವೇಳೆ ಸಚಿವರು, ಶಾಸಕರು ಉಪಸ್ಥಿತರಿದ್ದರು.
ಅರಮನೆಯಲ್ಲಿ ಖಾಸಗಿ ದರ್ಬಾರ್
ಮೈಸೂರು ಅಂಬಾವಿಲಾಸ ಅರಮನೆಯಲ್ಲಿ ದಸರಾ ಅಂಗವಾಗಿ ಇಂದಿನಿಂದ ಅ. 2ರವರೆಗೆ ರಾಜವಂಶಸ್ಥರಿಂದ ಖಾಸಗಿ ದರ್ಬಾರ್ ನಡೆಯಲಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಭರದ ಸಿದ್ದತೆ ನಡೆದಿದೆ. ರಾಜವಂಶಸ್ಥ, ಸಂಸದರೂ ಆದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 11ನೇ ವರ್ಷದ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ ಅವರು ಸಂಪ್ರದಾಯದಂತೆ ಕಂಕಣ ಕಟ್ಟಲಿದ್ದಾರೆ.
ಸೋಮವಾರ ಬೆಳಗ್ಗೆ 11.45ಕ್ಕೆ ಕೋಡಿ ಸೋಮೇಶ್ವರ ದೇವಸ್ಥಾನ ಮತ್ತು ಭೈರವೇಶ್ವರ ದೇವಸ್ಥಾನದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಒಂಟೆಯನ್ನು ಕಲಶ ಹೊತ್ತ ಮಹಿಳೆಯರೊಂದಿಗೆ ಅರಮನೆಗೆ ಕರೆತರಲಾಗುವುದು. ಯದುವೀರ್ ಅವರು ಮಧ್ಯಾಹ್ನ 12.42ರಿಂದ 12.58ರ ಶುಭ ಸಮಯದಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ಆರಂಭಿಸುವರು. ಅರಮನೆಯ ಅಧಿಕಾರಿಗಳು ಈಗಾಗಲೇ ದರ್ಬಾರ್ ಹಾಲ್‌ನಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸಿದ್ದಾರೆ. ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನವನ್ನು ಸ್ಥಾಪಿಸಲಾಗಿದೆ. 2.05ರಿಂದ 2.10ರವರೆಗೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.