Banglegudda Dharmasthala: ಬಂಗ್ಲೆಗುಡ್ಡದ ಇಂಚಿಂಚೂ ಶೋಧ.! ಇಡೀ ಟೀಮ್ ಹಾಜರ್ ಅಚ್ಚರಿ ಬೆಳವಣಿಗೆ
ಇಡೀ ಬಂಗ್ಲೆಗುಡ್ಡ ಶೋಧ ಮಾಡಿ..! ಎಲ್ಲೂ ಬಿಡಬೇಡಿ.. ಎಲ್ಲೆಲ್ಲಿ ಅಸ್ಥಿ ಪಂಜರಗಳು ಸಿಗುತ್ತೋ ಎಲ್ಲವನ್ನೂ ಎಫ್‌ಎಸ್‌ಎಲ್‌ಗೆ ಕಳಿಸಿಕೊಡಿ. ಇಂತದ್ದೊಂದು ಅಚ್ಚರಿ ಬೆಳವಣಿಗೆ ಇಂದು ಧರ್ಮಸ್ಥಳದ ಬಂಗ್ಲೆಗುಡ್ಡದ ಶೋಧಕಾರ್ಯಕ್ಕೆ ಸಂಬಂಧಪಟ್ಟ ಹಾಗೆ ನಡೆದಿದೆ.
ವಿಟ್ಠಲ್‌ಗೌಡ ಸ್ಥಳ ಮಹಜರು ಸಮಯದಲ್ಲಿ ತೋರಿಸಿದ ಏಳು ಅಸ್ಥಿಪಂಜರಗಳು ಈ ಕೇಸ್‌ನಲ್ಲಿ ಮಹತ್ವದ ತಿರುವು ನೀಡಿದೆ. ದಟ್ಟ ಕಾಡಾದ ಬಂಗ್ಲೆಗುಡ್ಡ ಎಂದಿಗೂ ಪಂಚಾಯಿತಿಯ ಸಮಾಧಿ ಸ್ಥಳವಾಗಿರಲೇ ಇಲ್ಲ. ಇಂತಹ ದಟ್ಟ ಕಾನನದಲ್ಲು ಮೂಳೆಗಳು ಹೇಗೆ ಪತ್ತೆಯಾಗಲು ಸಾಧ್ಯ?, ಇದಕ್ಕೆಲ್ಲಾ ಕಾರಣವೇನು?. ಈ ನಿಗೂಢ ರಹಸ್ಯದ ಹಿಂದಿರೋ ಸತ್ಯವೇನು? ಅನ್ನೋದನ್ನು ತಿಳಿಯಲು ಈಗಾಗ್ಲೇ ಎಸ್‌ಐಟಿ ಟೀಮ್ ಬಂಗ್ಲೆಗುಡ್ಡದ ಬಳಿ ಬೀಡು ಬಿಟ್ಟಿದೆ.
ಬೆಳ್ತಂಗಡಿ ಎಸ್‌ಐಟಿ ಕಛೇರಿಯಲ್ಲಿ ಮುಂಜಾನೆಯೇ ಧಿಡೀರ್ ಅಚ್ಚರಿ ಬೆಳವಣಿಗೆಗಳು ನಡೆದಿದ್ದು, ಸೋಕೋ ಟೀಮ್ ಕೂಡ ಆಗಮಿಸಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸ್ತಿರೋ ಈ ನಡೆಗಳು ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಯಲಿಗೆಳೆಯೋ ಸಾಧ್ಯತೆಗಳಿದೆ. ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ಕೂಡ ಶುರುವಾಗಿದೆ.
9 ಜನರ ಸೋಕೋ ಟೀಮ್ ಜತೆಗಿದ್ದು, 15 ಜನ ಅರಣ್ಯಾಧಿಕಾರಿಗಳು ತನಿಖೆಯ ಭಾಗವಾಗಿದ್ದಾರೆ. ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶವಾಗಿರೋದ್ರಿಂದ ಫಾರೆಸ್ಟ್ ಡಿಪಾರ್ಟ್ಮೆಂಟ್ ಕೂಡ ಸಹಕಾರ ನೀಡಬೇಕಾಗಿದೆ. ಅವ್ರ ಸಮ್ಮುಖದಲ್ಲಿ ಜಿತೇಂದ್ರ ದಯಾಮ, ಎಸ್‌ಪಿ ಸೈಮನ್ ಸೇರಿದಂತೆ ಇತರ ಅಧಿಕಾರಿಗಳು ಬಂಗ್ಲೆಗುಡ್ಡದತ್ತ ಹೆಜ್ಜೆ ಹಾಕಿದ್ದು ಇನ್ನಷ್ಟು ರೋಚಕತೆಯನ್ನು ತೆರೆದಿಟ್ಟಿದೆ.
ಇನ್ನು ಮೆಟಲ್ ಡಿಟೆಕ್ಷನ್ ಯಂತ್ರಗಳೊಂದಿಗೆ ಬಾಂಬ್ ನಿಷ್ಕ್ರಿಯ ದಳವೂ ಕೂಡ ಬಂಗ್ಲೆಗುಡ್ಡದಲ್ಲಿನ ರಹಸ್ಯವನ್ನು ಭೇದಿಸಲು ಮುಂದಾಗಿದೆ. ಈ 11 ಎ ಪಾಯಿಂಟ್ ಮೇಲ್ಭಾಗದಲ್ಲಿ ಕಂಡು ಬರುವ ಈ ಬಂಗ್ಲೆಗುಡ್ಡದಲ್ಲಿ ಅಪರಿಚಿತ ಮೃತದೇಹಗಳನ್ನು ಅವ್ಯಾಹತವಾಗಿ ಹೂಳಲಾಗಿದೆ. ಇದಕ್ಕೆ ಪಂಚಾಯಿತಿಯವ್ರ ಉಪಸ್ಥಿತಿಯೂ ಇಲ್ಲದೇ ಮಾಡಿರೋ ಕಾರ್ಯಗಳಿವು ಅನ್ನೋ ಆರೋಪಗಳಿಗೆ ಮತ್ತಷ್ಟು ಪುಷ್ಟಿ ಸಿಗ್ತಾ ಇದೆ. ಆದ್ರೆ, ವಿಟ್ಠಲ್‌ಗೌಡ ಮಾತ್ರ ತಮ್ಮ ಹೋಟೆಲ್‌ನಲ್ಲಿ ಆಕ್ಟಿವ್ ಆಗಿದ್ದು, ಎಸ್‌ಐಟಿ ಜೊತೆ ಸ್ಥಳ ಮಹಜರಿಗೆ ಬಂದಿಲ್ಲ. ನನ್ನ ಕೆಲಸ ಮಾಡಿಯಾಗಿದೆ. ಅದನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ನಾನು ಮಾತ್ರ ಏನು ರೀಪ್ಲೇ ಕೊಡೋದಿಲ್ಲ ಎಂದು ಸೈಲೆಂಟ್ ಆಗಿದ್ದಾರೆ.
ಚಿನ್ನಯ್ಯ ತೋರಿಸಿದ ಎಲ್ಲಾ ಜಾಗ ಬಿಟ್ಟು ವಿಟ್ಠಲ್‌ಗೌಡ ಹೇಳಿದ ಜಾಗದ ಕಡೆ ಎಸ್‌ಐಟಿ ಅಗೆಯೋ ಕಾರ್ಯಕ್ಕೆ ಮುಂದಾದ್ರೂ ಅಚ್ಚರಿ ಏನಿಲ್ಲ. ಬಂಗ್ಲೆಗುಡ್ಡ ಕಂದಾಯ ಇಲಾಖೆಗೆ ಒಳಪಡದ ವಿಶಾಲವಾದ ಭೂಮಿ. ಅರಣ್ಯ ವ್ಯಾಪ್ತಿಗೆ ಒಳಪಡುವ ಆಳ ಮತ್ತ ಅಗಲವಾದ ಭೂಮಿಯಾಗಿರೋದ್ರಿಂದ ಇದು ಸಮಾಧಿ ಸ್ಥಳವಾಗಿರೋಕೆ ಸಾಧ್ಯವೇ ಇಲ್ಲ. ಈ ಅವಶೇಷಗಳು ಇಲ್ಲಿ ಯಾಕೆ ಬರಲು ಸಾಧ್ಯ. ಆ ರೀತಿಯಾಗಿ ಹಕ್ಕುಗಳನ್ನು ಪಂಚಾಯಿತಿ ಹೊಂದಿದ್ರೆ ಅದಕ್ಕೆ ಸರಿಯಾದ ದಾಖಲೆಗಳನ್ನು ನೀಡಬೇಕು. ಪುರಾವೆಗಳನ್ನು ಸಲ್ಲಿಸಬೇಕು ಅನ್ನೋ ನಿರ್ಧಾರಕ್ಕೆ ಎಸ್‌ಐಟಿ ಬಂದಿದೆ.
ಈಗಾಗ್ಲೇ ಬಂಗ್ಲೆಗುಡ್ಡದ ಇತಿಹಾಸ, ಭೌಗೋಳಿಕತೆ, ಇಲ್ಲಿನ ನಿಗೂಢತೆ, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಎಸ್‌ಐಟಿ ಬಳಿ ಗುಡ್ಡದ ನಕ್ಷೆಯೂ ಕೂಡ ಇರೋದ್ರಿಂದ ತನಿಖೆಗೆ ಸಹಕಾರಿಯಾಗಲಿದೆ. ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಮಹೇಶ್ ತಿಮರೋಡಿ ಮಾನವ ಹಕ್ಕುಗಳ ಆಯೋಗಕ್ಕೆ ಒಂದು ದೂರನ್ನು ಸಲ್ಲಿಸಿದ್ದಾರೆ.
ದೂರಿನ ಮುಖ್ಯಾಂಶಗಳು:
ಇಂದು ನಾನು ಮಹೇಶ ಶೆಟ್ಟಿ ತಿಮರೋಡಿ, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ 30 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದು, ವ್ಯವಸ್ಥಿತ ಪೊಲೀಸ್ ಕಿರುಕುಳ, ಅಧಿಕಾರದ ದುರುಪಯೋಗ ಮತ್ತು ದುರುದ್ದೇಶಪೂರಿತ ಕ್ರಿಮಿನಲ್ ಮೊಕದ್ದಮೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHCR) ಔಪಚಾರಿಕವಾಗಿ ವಿವರವಾದ ದೂರನ್ನು ಸಲ್ಲಿಸಿದ್ದೇವೆ.
ಧರ್ಮಾಧಿಕಾರಿ ಕುಟುಂಬ ಮತ್ತು ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ನನ್ನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ರಾಜಕೀಯ ಪ್ರೇರಿತ ಎಫ್‌ಐಆರ್ (177/25) ದಾಖಲಿಸಲಾಗಿದೆ. ಸರಿಯಾದ ಲಿಖಿತ ಪ್ರತಿಕ್ರಿಯೆಗಳ ಹೊರತಾಗಿಯೂ ಪೋಲೀಸ್ ನೋಟಿಸ್‌ಗಳು ಮತ್ತು ನನ್ನ ಕಾನೂನುಬಾಹಿರ ಬಂಧಿಸಿದ್ದರು ಇದು ಕಾನೂನಿನ ಸಂಪೂರ್ಣ ಉಲ್ಲಂಘನೆ ಎಂದಿದ್ದಾರೆ.
10 ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಮತ್ತು ಮಾಧ್ಯಮ ಚಾನೆಲ್‌ಗಳ ಉಪಸ್ಥಿತಿಯನ್ನು ಒಳಗೊಂಡ ಪೂರ್ವ-ಯೋಜಿತ ಬಂಧನ ಕಾರ್ಯಾಚರಣೆ, ನನ್ನನ್ನು ಅವಮಾನಿಸುವ ಮತ್ತು ಅಪರಾಧಿಯನ್ನಾಗಿ ಮಾಡುವ ಉದ್ದೇಶದಿಂದ ನಡೆಸಲಾಗಿದೆ. ಎಫ್‌ಐಆರ್ 99/25 ರ ಅಡಿಯಲ್ಲಿ ಯುವಕರು ಸೇರಿದಂತೆ ಅಮಾಯಕ ಬೆಂಬಲಿಗರನ್ನು ಗುರಿಯಾಗಿಸುವುದು, ಅಲ್ಲಿ ಅಧಿಕಾರಿಗಳು ಅವರನ್ನು ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ತಪ್ಪಾಗಿ ರೂಪಿಸಲು ಪ್ರಯತ್ನಿಸಿದರು. ಬೆಂಬಲಿಗರ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು (94/25ಮತ್ತು 100/25 ದಾಖಲಿಸಲಾಗಿದೆ.
ನಾನು ನ್ಯಾಯಾಂಗ ಬಂಧನದಲ್ಲಿದ್ದಾಗ ನನ್ನ ವಿರುದ್ಧ, ದಾಖಲೆಗಳು ಸೃಷ್ಟಿಯಾಗಿವೆ ಇದು ಪೋಲೀಸ್ ಕುಶಲತೆಯನ್ನು ಬಹಿರಂಗಪಡಿಸಿದೆ. ತೀವ್ರವಾಗಿ ಅಧಿಕ ಬಿಪಿ ಇರುವ ಕಾರಣ ವೈದ್ಯರು ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸುವ ಶಿಫಾರಸು ಮಾಡಿದರೂ ಸಹ ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೋಮು ಹಿಂಸಾಚಾರದ ಶೂನ್ಯ ಇತಿಹಾಸದ ಹೊರತಾಗಿಯೂ – ರಾಜಕೀಯ ಒತ್ತಡದ ಮೂಲಕ ನನ್ನ ವಿರುದ್ಧ ಗಡಿಪಾರು (ದೇಶಭ್ರಷ್ಟ ಆದೇಶ) ಮಾಡಿಸುವ ಪ್ರಯತ್ನ ನಡೆಯುತ್ತಿವೆ.
NHCR ಗೆ ದೂರಿನ ಮೂಲಕ ಸಲ್ಲಿಸಿರುವ ಅಂಶಗಳು:
ಪಟ್ಟಿ ಮಾಡಲಾದ ಎಲ್ಲಾ ಎಫ್‌ಐಆರ್‌ಗಳಿಗೆ ಉನ್ನತ ಮಟ್ಟದ ವಿಚಾರಣೆಯನ್ನು ನಡೆಸಬೇಕು. ಗ್ರಾಮಸ್ಥರು ಮತ್ತು ಸಂತ್ರಸ್ತರೊಂದಿಗೆ ಮಾತನಾಡಲು ಸತ್ಯಶೋಧನಾ ಸಮಿತಿಯನ್ನು ರಚಿಸಿ. ಎಫ್‌ಐಆರ್‌ಗಳನ್ನು ನಿರ್ಮಿಸಿದ ಮತ್ತು ಕಾನೂನು ಮತ್ತು ವೈದ್ಯಕೀಯ ಹಕ್ಕುಗಳನ್ನು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿ.
ನನಗೆ, ನನ್ನ ಕುಟುಂಬಕ್ಕೆ ಮತ್ತು ಕಾರ್ಯಕರ್ತರಿಗೆ ಈರೀತಿಯಿಂದ ಎದುರಾಗುವ ಕಿರುಕುಳದಿಂದ ರಕ್ಷಣೆಯನ್ನು ನೀಡಬೇಕು. ಕಾರ್ಯಕರ್ತರ ವಿರುದ್ಧ ಪೋಲೀಸ್ ಅವರ ಅಧಿಕಾರದ ದುರುಪಯೋಗವನ್ನು ತಡೆಗಟ್ಟಲು ನೀತಿ ರಕ್ಷಣಗಳನ್ನು ಶಿಫಾರಸು ಮಾಡಿ ಎಂದು ಮಹೇಶ್ ತಿಮರೋಡಿ ದೂರು ಸಲ್ಲಿಸಿದ್ದಾರೆ.