Smuggling: ಬೆಂಗಳೂರಿನಲ್ಲಿ 9.93 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಜಪ್ತಿ 

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 7 ಆರೋಪಿಗಳನ್ನು ಸೆರೆ ಹಿಡಿದು 9.93 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳಿಂದ 3.858 ಕೆಜಿ ಎಂಡಿಎಂಎ ಕ್ರಿಸ್ಟೆಲ್‌, 41 ಗ್ರಾಂ ಎಕ್ಸೈಟೆಸಿ ಫಿಲ್ಸ್‌, 1.082 ಗ್ರಾಂ ಹೈಡ್ರೋ ಗಾಂಜಾ, 6 ಕೆಜಿ ಗಾಂಜಾ ಹಾಗೂ ಕಾರು ಸೇರಿ ಒಟ್ಟು 9.93 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆವಿನ್ ರೋಜರ್ ಬಂಧಿತ ಆರೋಪಿಯಾಗಿದ್ದು, ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೇರಳದಿಂದ ಕಡಿಮೆ ಬೆಲೆಗೆ ಹೈಡ್ರೋಗಾಂಜಾ ತಂದು ಬೆಂಗಳೂರಿನಲ್ಲಿ ಪರಿಚಯದ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಈತನಿಂದ 500 ಗ್ರಾಂ ಹೈಡ್ರೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಕಾರು, ಒಂದು ಬೈಕ್ ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಕೇರಳ ಮೂಲದ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರಂಜಿತ್ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಆಡುಗೋಡಿಯಲ್ಲಿ ರಂಜಿತ್ ಸಿಕ್ಕಿಬಿದ್ದಿದ್ದು, ಆತನಿಂದ 32 ಲಕ್ಷ ರು. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಚಟ ಬಿಡಿಸಲು ಪುನರ್ವಸತಿ ಕೇಂದ್ರಕ್ಕೂ ರಂಜಿತ್‌ನನ್ನು ಆತನ ಪೋಷಕರು ಸೇರಿಸಿದ್ದರು. ಆದರೆ ವ್ಯಸನ ಮುಕ್ತನಾಗದೆ ಅದೇ ವೃತ್ತಿ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ವಿದೇಶದಿಂದ ಅಂಚೆ ಮೂಲಕ ನಗರಕ್ಕೆ ಬಂದಿದ್ದ 1 ಕೋಟಿ ರು. ಮೌಲ್ಯದ 1.22 ಕೆಜಿ ಹೈಡ್ರೋ ಗಾಂಜಾವನ್ನು ಸಿಸಿಬಿ ಜಪ್ತಿ ಮಾಡಿದೆ. ವಿದೇಶದಿಂದ ಗಾಂಜಾ ಖರೀದಿಸಿದ್ದ ಆರೋಪಿಯ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಮುಂದುವರಿಸಿದೆ.

ಇಬ್ಬರು ವಿದೇಶಿ ಪ್ರಜೆಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಎನ್‍ಗ್ವು ಕಿಂಗ್‍ಸ್ಲೆ ಹಾಗೂ ಥಾಮಸ್ ನವೀದ್ ಚಿಮೆ ಬಂಧಿತ ಆರೋಪಿಗಳು.

Rakesh arundi

Leave a Reply

Your email address will not be published. Required fields are marked *