Belagavi: ಹೆರಿಗೆ ಬಳಿಕ ಹೃದಯಾಘಾತ, ಬಾಣಂತಿ ಸಾವು: ವೈದ್ಯರ ವಿರುದ್ದ ಕುಟುಂಬಸ್ಥರು ಆಕ್ರೋಶ
ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಬಾಣಂತಿ ಪೂರ್ಣಿಮಾ ರಾಠೋಡ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಎದುರು ಮೃತಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ ಜಿಲ್ಲೆಯ ಅರೆಬೆಂಚಿ ತಾಂಡದ ಪೂರ್ಣಿಮಾ ರಾಠೋಡ್ ಅವರನ್ನ ಹೆರಿಗೆ ನೋವು ಎಂದು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12.30ರ ವೇಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಯಿತು. ಬಳಿಕ ಬಾಣಂತಿ ಪೂರ್ಣಿಮಾ ರಾಠೋಡ್ ಆರಾಮಾಗಿ ಇದ್ದರು. ಆದ್ರೆ ಸಂಜೆ 7 ರಿಂದ 7.30ರ ಅವಧಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಜೇರಿಯನ್ ನಂತರ ಪೂರ್ಣಿಮಾ ಬಳಲುತ್ತಿದ್ದಳು. ಆ ಸಮಯದಲ್ಲಿ ವೈದ್ಯರು ಬಾರದೇ ನರ್ಸಗಳು ಮಾತ್ರ ಇಂಜೆಕ್ಷನ್ ಕೊಟ್ಟರು. ಇಂಜೆಕ್ಷನ್ ನಂತರ ಅವಳ ಸ್ಥಿತಿ ಹದಗೆಟ್ಟು ಪ್ರಾಣ ಬಿಟ್ಟಳು ಎಂದು ಕುಟುಂಬ ಸದಸ್ಯರು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಆರೋಪಿಸಿದ್ದಾರೆ.
ಪೂರ್ಣಿಮಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆಯಾಗಿದ್ದು, ಸಮರ್ಪಕ ಚಿಕಿತ್ಸೆ ನೀಡಲಾಗಿತ್ತು. ಸಂಜೆ ಏಕಾಏಕಿ ಅವರ ರಕ್ತದೊತ್ತಡ ಕುಸಿದು ಹೃದಯಾಘಾತವಾಯಿತು. ನಾವು ಬದುಕಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ದುರಾದೃಷ್ಟವಶಾತ್ ಅವರು ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.