Bigg Boss Ranjith: ಜೀವ ಬೆದರಿಕೆ ಹಾಕಿದ ಆರೋಪ: ಬಿಗ್ ಬಾಸ್ ರಂಜಿತ್ ವಿರುದ್ಧ ದೂರು ದಾಖಲು
ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಜನಪ್ರಿಯರಾದ ರಂಜಿತ್ ಮತ್ತು ಅವರ ಅಕ್ಕ ನಡುವೆ ಫ್ಲಾಟ್‌ನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದು, ಅವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಕಿದ ಆರೋಪದಡಿ ದೂರು ದಾಖಲಾಗಿದೆ.
2018ರಿಂದ ಅಮೃತಹಳ್ಳಿಯ ಫ್ಲ್ಯಾಟ್ನಲ್ಲಿ ರಂಜಿತ್ ಸಹೋದರಿ ರಶ್ಮಿ ಹಾಗೂ ಅವರ ಪತಿ ಜಗದೀಶ್ ವಾಸವಿದ್ದಾರೆ. 2025ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರಂತೆ. ಇದೀಗ ಮನೆ ವಿಚಾರಕ್ಕೆ ಅಕ್ಕ ತಮ್ಮನ ನಡುವೆ ಗಲಾಟೆ ಆಗಿದೆ. ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದೆ.
ಮನೆ ಹಕ್ಕು ವಿಚಾರದಲ್ಲಿ ಉಂಟಾದ ವಾಗ್ವಾದದ ಸಮಯದಲ್ಲಿ ರಂಜಿತ್ ತಮ್ಮ ಅಕ್ಕ ಹಾಗೂ ಅವರ ಪತಿ ಜಗದೀಶ್ ನಡುವೆ ಗಲಾಟೆ ನಡೆಸಿ, ತಮಗೆ ಜೀವ ಬೆದರಿಕೆ ಹಾಕಿದ್ದಾರೆ . ಇದಕ್ಕೆ ಸಾಕ್ಷ್ಯವಾಗಿ ಮನೆಯಲ್ಲಿ ನಡೆದ ಬೈದಾಟ ಮತ್ತು ಜಗಳದ ವೀಡಿಯೋವನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ದೂರು ಸ್ವೀಕರಿಸಿದ ಅಮೃತಹಳ್ಳಿ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿದ್ದಾರೆ. ನಂತರ ರಂಜಿತ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಗಲಾಟೆ ನಡೆಯದಂತೆ ಎಚ್ಚರಿಕೆ ನೀಡಿದ್ದು, ವಿವಾದವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.