Darshan: ಶಿಕ್ಷಕಿಗೆ ಅಶ್ಲೀಲ ಪೋಸ್ಟ್, ದರ್ಶನ್ ಫ್ಯಾನ್ಸ್ ವಿರುದ್ಧ ಕೇಸ್
ಸರ್ಕಾರಿ ಶಾಲಾ ಶಿಕ್ಷಕಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್, ಅತ್ಯಾಚಾರದ ಬೆದರಿಕೆಯ ಪೋಸ್ಟ್ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಅಜಿತ್ ಆನಂದ್ ಹೆಗಡೆ ಎಂಬುವವರು ಬೆಂಗಳೂರಿನ ವಿಜಯನಗರದ ಗೋವಿಂದರಾಜನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 24ರಂದು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ‘ಖದರ್ ಕನ್ನಡಿಗ’ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ಅಶ್ಲೀಲವಾಗಿ ಸಂದೇಶ ಪ್ರಕಟಿಸಲಾಗಿದೆ. ಹೆತ್ತವರ ಅನುಮತಿ ಇಲ್ಲದೆ ಪುಟ್ಟ ಮಕ್ಕಳ ಫೋಟೋಗಳನ್ನು ಕೂಡ ಬಳಸಿಕೊಂಡು, ಗುರುತು ಮರೆ ಮಾಚದೆ ಕಿಡಿಗೇಡಿಗಳು ಪೋಸ್ಟ್ ಮಾಡಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಅಜಿತ್ ಅವರ ಪತ್ನಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು, ದರ್ಶನ್ ಅಭಿಮಾನಿಗಳು ಅತ್ಯಾಚಾರದ ಬೆದರಿಕೆಯನ್ನು ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪತ್ನಿಯ ಭದ್ರತೆ ಹಾಗೂ ಖಾಸಗಿತನಕ್ಕೆ ಧಕ್ಕೆ ಬಂದಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಅಜಿತ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನಟಿ ರಮ್ಯಾ ಹಾಗೂ ಸೋನು ಶೆಟ್ಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಅಶ್ಲೀಲ ಕಮೆಂಟ್ ಮತ್ತು ಬೆದರಿಕೆ ಹಾಕಿದ್ದ ಸಂಬಂಧ ನಟ ದರ್ಶನ್‌ರ ಅಭಿಮಾನಿಗಳ ವಿರುದ್ಧ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಪೊಲೀಸರು ಈ ಸಂಬಂಧ ಕೆಲವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೂ ದರ್ಶನ್ ಅಭಿಮಾನಿಗಳ ಹುಚ್ಚಾಟ ನಿಂತಿಲ್ಲ. ಪೊಲೀಸರ ಖಡಕ್ ಎಚ್ಚರಿಕೆಯ ನಂತರವೂ ಸಾಮಾಜಿಕ ಜಾಲತಾಣದಲ್ಲಿಅಶ್ಲೀಲ ಪೋಸ್ಟ್, ಬೆದರಿಕೆ ಹಾಕುವುದನ್ನು ಮುಂದುವರಿಸಿದ್ದಾರೆ.