Asha Jois: ಸ್ನೇಹಿತೆಯ ಖಾಸಗಿ ಫೋಟೋ, ವಿಡಿಯೊ ಕದ್ದು ಬ್ಲ್ಯಾಕ್ ಮೇಲ್: ಕಿರುತೆರೆ ನಟಿ ವಿರುದ್ಧ ಎಫ್‌ಐಆರ್
ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಆಶಾ ಜೋಯಿಸ್ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಕೇಳಿ ಬಂದಿದೆ. ಖಾಸಗಿ ವಿಡಿಯೊ, ಫೋಟೊಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಪಾರ್ವತಿ (61) ಎಂಬುವರು ನೀಡಿದ ದೂರಿನ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಾರ್ವತಿಗೆ ಮೂರು ವರ್ಷದ ಹಿಂದೆ ಆಶಾ ಜೋಯಿಸ್ ಪರಿಚಯವಾಗಿದ್ದರು. ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಹಾಗೂ ಸೀರಿಯಲ್ ನಟಿ ಎಂದು ಹೇಳಿ ಆಶಾ ಹೇಳಿಕೊಂಡಿದ್ದರು.
ಪಾರ್ವತಿ ಹಲವು ವರ್ಷಗಳ ಹಿಂದೆ ತಾನು ಕೆಲಸ ಮಾಡುವ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು. ಈ ವಿಚಾರ ತಿಳಿದ ಆಶಾ ಪತಿಗೆ ಬ್ಲ್ಯಾಕ್ ಮೇಲ್ ಮಾಡಲು ಬಲವಂತ ಮಾಡಿದ್ದಾರೆ. ಸ್ನೇಹಿತೆಯ ಖಾಸಗಿ ವಿಡಿಯೊ, ಫೋಟೊಗಳನ್ನು ಕದ್ದು ಇತರರ ಜತೆ ಹಂಚಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅಲ್ಲದೇ 2 ಕೋಟಿ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡಲು ಬಲವಂತದ ಪ್ರಚೋದನೆ ನೀಡಿರುವ ಆರೋಪ ಮಾಡಲಾಗಿದೆ.
ಆಶಾ ಜೋಯಿಸ್ ಬಲವಂತಕ್ಕೆ ಪಾರ್ವತಿ ಒಪ್ಪದೆ ನಿರಾಕರಿಸಿದ್ದಳು. ಇದೇ ದ್ವೇಷಕ್ಕೆ ಆಕೆಯ ಖಾಸಗಿ ವಿಡಿಯೊಗಳು, ವಾಯ್ಸ್ ರೆಕಾರ್ಡ್ ಹಾಗೂ ಪ್ರೈವೇಟ್ ಫೋಟೊಗಳನ್ನು ನಟಿ ಕದ್ದಿದ್ದಾರೆ. ಬಳಿಕ ಅವುಗಳನ್ನು ಪಾರ್ವತಿ ಅವರಿಗೆ ಪರಿಚಯ ಇರುವ ವ್ಯಕ್ತಿಗಳಿಗೆ ಕಳಿಸಿದ್ದಳಂತೆ. ಈ ಹಿನ್ನೆಲೆಯಲ್ಲಿ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾವನ್ನು ಕದ್ದಿದ್ದಾರೆಂದು ಆರೋಪಿಸಿ ಪಾರ್ವತಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ಆಶಾ ಜೋಯಿಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.