Bus Fire: ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೊ ಬಸ್ಗೆ ಬೆಂಕಿ: 20ಕ್ಕೂ ಹೆಚ್ಚು ಮಂದಿ ಸಜೀವ ದಹನ
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿರುವ ಘಟನೆ ಆಂಧ್ರದ ಕರ್ನೂಲ್ ಹೆದ್ದಾರಿಯ ಬಳಿಯ ಚಿನ್ನಟೇಕೂರು ಗ್ರಾಮದ ಬಳಿ ನಡೆದಿದೆ.
ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ಸಿನಲ್ಲಿ 44 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶುಕ್ರವಾರ ಬಳಗಿನ ಜಾವ 3 ಗಂಟೆಯ ವೇಳೆಗೆ ಬೈಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಬೈಕ್ ಬಸ್ಸಿನ ಕೆಳಗಡೆಯಿಂದ ಮುಂದಕ್ಕೆ ಹೋಗಿ ಸಿಲುಕಿದೆ. ಇದರ ಅರಿವಿಲ್ಲದೆ ಬೈಕನ್ನು ಬಸ್ಸು ಒಂದಿಷ್ಟು ದೂರ ಎಳೆದೊಯ್ದಿದೆ. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಅದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಬೈಕ್ ಸವಾರ ಕೂಡ ಅಪಘಾತದಲ್ಲಿ ಸಾವನ್ನಪಿರಬಹುದು ಎಂದು ಊಹಿಸಲಾಗಿದೆ.
ಬೆಂಕಿ ಹೊತ್ತಿದ್ದರಿಂದ ಪ್ರಯಾಣಿಕರು ಹೊರಬರಲು ಹರಸಾಹಸ ಪಟ್ಟಿದ್ದಾರೆ. ಕೆಲವರು ತುರ್ತು ನಿರ್ಗಮನದಿಂದ ಹೊರ ಬಂದರೆ, ಇನ್ನು ಕೆಲವರು ಕಿಟಕಿಯ ಗ್ಲಾಸ್ ಒಡೆದು 12 ಪ್ರಯಾಣಿಕರು ಹೊರಜಿಗಿದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಷ್ಟರೊಳಗೆ ಕೆಲವು ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ಇದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 23 ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.
ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು ಹೊರತೆಗೆಯಲು ಹರಸಹಾಸ ಪಟ್ಟಿದ್ದಾರೆ. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಸಂತಾಪ
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರಿಗೆ ತ್ವರಿತ ಪರಿಹಾರ ಮತ್ತು ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಧಾನಿ ಸಂತಾಪ, ಪರಿಹಾರ ಘೋಷಣೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.