Mandya: ಕೆಆರ್‌ಎಸ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು: ನದಿ ಪಾತ್ರದ ಜನರಿಗೆ ಅಲರ್ಟ್
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಈ ಹಿನ್ನೆಲೆ ಯಾವುದೇ ಕ್ಷಣದಲ್ಲಾದರು ಡ್ಯಾಂನಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡುವ ಸಾಧ್ಯತೆ ಇದೆ. ಹೀಗಾಗಿ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ಈಗಾಗಲೇ ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳೂ ಗರಿಷ್ಠ ಮಟ್ಟ ತಲುಪಿವೆ. ಈ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಇದರಿಂದಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದುಬರುವ ಸಾಧ್ಯತೆಗಳಿರುವುದರಿಂದ ಮುನ್ನಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಇಂದು ಸಂಜೆ ಅಥವಾ ರಾತ್ರಿಯಿಂದ 25 ಸಾವಿರ ಕ್ಯೂಸೆಕ್‌ನಿಂದ 40 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುವುದು ಎಂದು ಕೃಷ್ಣರಾಜಸಾಗರ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದ್ಯ ಕೆಆರ್‌ಎಸ್ ಡ್ಯಾಂನ ಒಳಹರಿವಿನ ಪ್ರಮಾಣ 20,797 ಕ್ಯೂಸೆಕ್ ಇದ್ದು, 25 ಸಾವಿರ ಕ್ಯೂಸೆಕ್‌ನ್ನು ಸದ್ಯ ನದಿಗೆ ಬಿಡಲಾಗುತ್ತಿದೆ.