Haveri: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂರು ಮಂದಿ ಬಲಿ
ದೀಪಾವಳಿ ಹಬ್ಬದ ಹಿನ್ನಲೆ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೊಬ್ಬರಿ ಹೋರಿಗಳ ತಿವಿತಕ್ಕೆ ಪ್ರತ್ಯೇಕ ಮೂರು ಕಡೆಗಳಲ್ಲಿ ನಾಲ್ವರು ಗಾಯಗೊಂಡು, ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ನಗರದ ದಾನೇಶ್ವರಿ ನಗರದ ನಿವಾಸಿ, ನಿವೃತ್ತ ಹೆಸ್ಕಾಂ ನೌಕರ ಚಂದ್ರಶೇಖರ್ ಕೋಡಿಹಳ್ಳಿ (70) ಎನ್ನುವವರು ಹಳೆ ಪಿ.ಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೋರಿ ಹಾಯ್ದು ಮೃತಪಟ್ಟಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿಯಿಂದ ಈ ಅವಘಡ ನಡೆದಿದೆ.
ಸ್ಪರ್ಧೆ ವೇಳೆ ಹೋರಿ ಮನೆಗೆ ನುಗ್ಗಿದ ಪರಿಣಾಮ ದೇವಿಹೊಸೂರು ಗ್ರಾಮದಲ್ಲಿ ಮನೆ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಮಹಮ್ಮದ ಹುಸೇನ ಬಂಕಾಪೂರ (75) ಎಂಬವರು ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತೊಂದು ಘಟನೆ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಭರತ ರಾಮಪ್ಪ ಹಿಂಗಮೇರಿ (24) ಎನ್ನುವ ಯುವಕ ಹೋರಿ ಸ್ಪರ್ಧೆಯನ್ನು ನೋಡಲು ಹೋಗಿದ್ದರು. ಈ ವೇಳೆ ಹೋರಿ ಗುದ್ದಿದ್ದು ಮೃತಪಟ್ಟಿದ್ದಾರೆ. ಈ ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.