Bengaluru: ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಕಾವೇರಿ ನದಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ.
ರಾಜ್ಯದ 12 ಪ್ರಮುಖ ನದಿಗಳ ನೀರಿನ್ನು 32 ಕಡೆಗಳಲ್ಲಿ ಪರಿಶೀಲನೆ ನಡೆಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ ನೀರಲ್ಲಿ ಆಮ್ಲಜನಕದ ಕೊರತೆ ಇರುವ ಕಾರಣ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ. ಸೆಪ್ಟೆಂಬರ್‌ನಲ್ಲಿ ನಡೆಸಲಾದ ಪರೀಕ್ಷಾ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. ಪರೀಕ್ಷೆಗೆ ಒಳಪಟ್ಟ 12 ನದಿಗಳ ಪೈಕಿ ಒಂದೂ ನದಿಗೂ `ಎ’ ದರ್ಜೆ ಸಿಕಿಲ್ಲ. ಹೀಗಾಗಿ ಯಾವುದೇ ನದಿ ನೀರನ್ನು ನೇರವಾಗಿ ಕುಡಿಯಲು ಬಳಕೆ ಮಾಡಬಾರದು. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದೆ ಎಂದು ಸ್ಪಷ್ಟಪಡಿಸಿದ್ದಾರೆ
12 ನದಿಗಳ ಪೈಕಿ ನೇತ್ರಾವತಿ ನದಿ ನೀರು ಮಾತ್ರ ‘ಬಿ’ ದರ್ಜೆಯ ಗುಣಮಟ್ಟ ಹೊಂದಿದೆ. ಈ ನೀರನ್ನು ಸ್ನಾನ ಅಥವಾ ಗೃಹ ಬಳಕೆಗೆ ಉಪಯೋಗಿಸಬಹುದು. ಅದನ್ನು ಹೊರತುಪಡಿಸಿ ನೇರವಾಗಿ ಕುಡಿಯಲು ಯೋಗ್ಯವಲ್ಲ. ಉಳಿದಂತೆ 8 ನದಿಗಳ ನೀರು ‘ಸಿ’ ಮತ್ತು ಮೂರು ನದಿಗಳ ನೀರು ‘ಡಿ’ ದರ್ಜೆಯ ಗುಣಮಟ್ಟ ಹೊಂದಿವೆ.
ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಸಿಂಷಾ, ಕೃಷ್ಣಾ ನದಿಗೆ ‘ಸಿ’ ದರ್ಜೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಭೀಮಾನದಿ, ಕಾಗಿಣಾ ಹಾಗೂ ಅರ್ಕಾವತಿ ನದಿಗಳಿಗೆ ‘ಡಿ’ ದರ್ಜೆ ನೀಡಲಾಗಿದೆ.