Hasanambe Devi: ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ: ಹರಿದು ಬಂದ ಭಕ್ತಸಾಗರ
ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ಇಂದು ಕೊನೆ ದಿನ. ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.
ಅಕ್ಟೋಬರ್ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ.
ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದ್ದು, ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಟಿಕೆಟ್ ಹಾಗೂ ಲಾಡು ಪ್ರಸಾದದಿಂದ ದೇಗುಲಕ್ಕೆ ಒಟ್ಟು 22 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಇಂದು ಕೊನೆಯ ದಿನ ಭಕ್ತಸಾಗರವೇ ಹರಿದುಬರುತ್ತಿದ್ದು, ಸದ್ಯ ಧರ್ಮದರ್ಶನ ಸಾಲು ಎಂಟು ಕಿಲೋಮೀಟರ್ ಮುಟ್ಟಿದೆ. ಇಂದು ಸಂಜೆ 7 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದ್ದು, ನಾಳೆ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಗುತ್ತದೆ.