Assault Case: ಪೋಷಕರಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಮನಸೋಇಚ್ಛೆ ಥಳಿಸಿದ ಶಿಕ್ಷಕ

ಪೋಷಕರಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕ ಕಾಲಿನಿಂದ ಒದ್ದು ಮನಸೋಇಚ್ಛೆ ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ಶಿಕ್ಷಕನ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ವೇದಾಧ್ಯಯನ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಹಲವು ವಿದ್ಯಾರ್ಥಿಗಳು ವೇದಾಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಪೋಷಕರಿಗೆ ಬೇರೆಯವರ ಮೊಬೈಲ್‌ನಿಂದ ಕರೆ ಮಾಡಿದ್ದಕ್ಕೆ ವೀರೇಶ್ ಹಿರೇಮಠ್ ಎಂಬ ಮುಖ್ಯ ಶಿಕ್ಷಕ ಮನಸೋಇಚ್ಛೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ.

ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಎಲ್ಲೆಂದರಲ್ಲಿ ಮನಬಂದಂತೆ ಒದ್ದಿದ್ದಾನೆ. ಬಳಿಕ ಕೈಯಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಶಿಕ್ಷಕನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ದೂರು ನೀಡಿದ್ದು, ನಾಯಕನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಅಧ್ಯಾಪಕನಿಗಾಗಿ ಶೋಧಿಸುತ್ತಿದ್ದಾರೆ.

Rakesh arundi

Leave a Reply

Your email address will not be published. Required fields are marked *