Bengaluru: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ನಾಳೆ ಗೋಪೂಜೆ ಕಡ್ಡಾಯ: ಸಚಿವ ರಾಮಲಿಂಗಾ ರೆಡ್ಡಿ
ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ನಾಳೆ ಗೋಪೂಜೆ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮೌಖಿಕ ಆದೇಶ ಹೊರಡಿಸಿದ್ದಾರೆ.
ದೀಪಾವಳಿ ಬಲಿಪಾಡ್ಯಮಿ ದಿನದಂದು ಅಂದರೆ ನಾಳೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಗೋಪೂಜೆ ನಡೆಸುವಂತೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಬಲಿಪಾಡ್ಯಮಿಯ ದಿನದಂದು ದೇವಾಲಯಗಳಲ್ಲಿ ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಈ ಪೂಜೆಯ ಭಾಗವಾಗಿ, ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯದ ಆವರಣಕ್ಕೆ ಕರೆತರಬೇಕು. ನಂತರ ಅರಿಶಿಣ, ಕುಂಕುಮ ಬಳಿದು ಹೂವುಗಳಿಂದ ಅಲಂಕರಿಸಬೇಕು. ಗೋವುಗಳಿಗೆ ಗೋಗ್ರಾಸ ವಾಗಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಸುಗಳನ್ನು ನೀಡುವಂತೆಯೂ ಸಚಿವರು ಆದೇಶಿಸಿದ್ದಾರೆ.