Self Harming: ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ಒರಿಸ್ಸಾ ಮೂಲದ ಜೋಡಿ ಆತ್ಮಹತ್ಯೆ
ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಒರಿಸ್ಸಾ ಮೂಲದ ಸೀಮಾ ನಾಯಕ್ (25) ಮತ್ತು ರಾಕೇಶ್ (23) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ ಗಾಜು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಸ್ಥಳೀಯರು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ರಾಕೇಶ್ ಕುಡಿದು ಬಂದು ಹಣಕ್ಕಾಗಿ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ಸಹ ಹಣಕ್ಕಾಗಿ ಸೀಮಾ ಜೊತೆ ಜಗಳ ಮಾಡಿದ್ದ. ಹಣ ನೀಡುವುದಿಲ್ಲ ಎಂದು ಸೀಮಾ ಮಲಗಿದ್ದಳು. ಬೆಳಿಗ್ಗೆ ಎದ್ದು ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಹಗ್ಗ ತುಂಡರಿಸಿ ಬದುಕಿಸಲು ಪ್ರಯತ್ನ ಮಾಡಿದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ. ಬಳಿಕ ಸೀಮಾ ಕೂಡ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.