Bengaluru: ಆರ್ ಎಸ್ ಎಸ್ ನಿಷೇಧಿಸಬೇಕು 25 ವರ್ಷಗಳ ಹಿಂದೆ ಎಚ್. ಡಿ. ದೇವೇಗೌಡರ ಹೇಳಿಕೆ: ಪ್ರಿಯಾಂಕ್ ಖರ್ಗೆ ಟ್ವೀಟ್!
ಆರ್ ಎಸ್ ಎಸ್ ನಿಷೇಧವಾಗಬೇಕು ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು 25 ವರ್ಷಗಳ ಹಿಂದೆಯೇ ಹೇಳಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಜೆಡಿಎಸ್ ಗೆ ತಿರುಗೇಟು ನೀಡಿದ್ದಾರೆ. ಈ ಕುರಿತ ಪತ್ರಿಕಾ ವರದಿಯೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಮತ್ತು ಆರ್ ಎಸ್ ಎಸ್ ಚಟುವಟಿಕೆಗಳಿ ಸರ್ಕಾರಿ ನೌಕರರು ಪಾಲ್ಗೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಎರಡು ಪತ್ರ ಬರೆದಿದ್ದರು.
ಈ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಆರ್ಎಸ್ಎಸ್ ನಿಷೇಧಿಸಲಾಗುದು ಎಂದು ಹೇಳಿದ್ದರು.
ಇದಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ‘ಆರ್ ಎಸ್ ಎಸ್ ನಿಷೇಧವಾಗಬೇಕು’ ಇದು ಜೆಡಿಎಸ್ ನವರ ಮನ್ ಕಿ ಬಾತ್! ಈ ಮನದಾಳದ ಮಾತುಗಳನ್ನು ಇಂದು ಮರೆತಿದ್ದಾರೆಯೇ ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಹಳೆಯ ಪಾಳೆಯುಳಿಕೆಯಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಬಿಜೆಪಿಯವರಿಗೆ ನೆನಪು ಮಾಡಲು ಬಯಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರ್ಎಸ್ಎಸ್, ವಿಹೆಚ್ ಪಿ, ಬಜರಂಗದಳ ಮತ್ತು ಶಿವಸೇನೆಯಂತಹ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆ ವೇಳೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದರು. ದಕ್ಷಿಣ ಗುಜರಾತ್ ಭಾಗದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ನಡೆದ ದಾಳಿಗೆ ಈ ಸಂಘಟನೆಗಳೇ ಕಾರಣ ಎಂದು ದೇವೇಗೌಡರು ಆರೋಪಿಸಿದ್ದರು. ಅಂದಿನ ಪೇಪರ್ ಕಟ್ಟಿಂಗ್ ಅನ್ನು ಅಟ್ಯಾಚ್ ಮಾಡಿ, ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.