Suicide: ಸಂಬಳ ಸಿಗದೆ ಮನನೊಂದು ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ವಾಟರ್‌ಮ್ಯಾನ್ ನೇಣಿಗೆ ಶರಣು
ಎರಡು ವರ್ಷಗಳಿಂದ ಸಂಬಳ ನೀಡದ್ದಕ್ಕೆ ಬೇಸತ್ತು ಗ್ರಾಮ ಪಂಚಾಯತ್ ವಾಟರ್‌ಮ್ಯಾನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದಲ್ಲಿ ನಡೆದಿದೆ.
ವಾಟರ್‌ಮ್ಯಾನ್ ಚಿಕ್ಕಸು ನಾಯಕ (65) ಅವರು ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲ ಬಳಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆಯು ಗ್ರಾಮಸ್ಥರು ಕಚೇರಿಗೆ ಬಂದಾಗ ಬೆಳಕಿಗೆ ಬಂದಿದ್ದು, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಚಿಕ್ಕಸು ನಾಯಕ ಡೆತ್ ನೋಟ್ ಬರೆದು ಗೋಡೆಗೆ ಅಂಟಿಸಿದ್ದಾರೆ. ಗ್ರಾಪಂ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್, ಪಿಡಿಒ ರಾಮೇಗೌಡ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ 27 ತಿಂಗಳುಗಳಿಂದ ಸಂಬಳ ಸಿಗದೆ ಚಿಕ್ಕಸು ಬೇಸತ್ತು ಹೋಗಿದ್ದರು. 5,000 ರೂಪಾಯಿಗಳ ಸಂಬಳವನ್ನೂ ಗ್ರಾಮ ಪಂಚಾಯಿತಿಯಿಂದ ಪಡೆಯಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕಸು, ತಮ್ಮ ಕುಟುಂಬದ ಜೀವನಾಧಾರಕ್ಕಾಗಿ ಈ ಕೆಲಸವನ್ನು ಆಶ್ರಯಿಸಿದ್ದರು. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಓಗಳಿಬ್ಬರ ಬಳಿಯೂ ವೇತನದ ಬೇಡಿಕೆಯಿಟ್ಟಾಗ ಗದರಿಸಿ ಕಳುಹಿಸುತ್ತಿದ್ದರೇ ಹೊರತು ವೇತನ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತ ಚಿಕ್ಕಸು, ಡೆತ್‌ನೋಟ್ ಬರೆದಿಟ್ಟು, ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.