Kiran Majumdar: ಬೆಂಗಳೂರನ ರಸ್ತೆ ಗುಂಡಿಗಳ ಬಗ್ಗೆ ಕಿರಣ್ ಮಜುಂದಾರ್ ಅಸಮಾಧಾನ
ಬಯೋಕಾನ್ ಮುಖ್ಯಸ್ಥೆ, ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಬೆಂಗಳೂರಿನ ರಸ್ತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗವಾಗಿ ಪೋಸ್ಟ್ ಹಾಕುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
ಬಯೋಕಾನ್ ಪಾರ್ಕ್‌ಗೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಭೇಟಿ ನೀಡಿದ್ದರು. ಈ ವೇಳೆ ಹದಗೆಟ್ಟ ರಸ್ತೆ, ಕಸದ ಬಗ್ಗೆ ನನ್ನ ಪ್ರಶ್ನಿಸಿದರು. ಯಾಕೆ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಪ್ರಶ್ನಿಸಿದ್ದಾರೆ ಎಂದು ಕಿರಣ್ ಮಜುಂದಾರ್ ಷಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ್ದಾರೆ.
ಕಿರಣ್ ಮಜುಂದಾರ್ ಷಾ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು, ಬೆಂಗಳೂರಿಗೆ ಕಿರಣ್ ಮಜುಂದಾರ್ ಅವರ ಕೊಡುಗೆ ಇದೆ. ಹಾಗೆಯೇ ಬೆಂಗಳೂರು ಕೂಡ ಕಿರಣ್ ಮಜುಂದಾರ್ಗೆ ಎಲ್ಲವೂ ಕೊಟ್ಟಿದೆ. ಮಳೆ ಆದ ಮೇಲೆ ಎಲ್ಲಾ ಕಡೆ ಹಾನಿಯಾಗಿ ಇಡೀ ರಾಜ್ಯದಲ್ಲಿ ಸಮಸ್ಯೆ ಆಗಿದೆ. ಮಳೆ ಬರುವಾಗ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗುವುದಿಲ್ಲ. ಹೀಗಿದ್ದರೂ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಬೆಂಗಳೂರಿನಲ್ಲಿ 1,000 ಕೋಟಿ ವೆಚ್ಚದಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಸ್ವಲ್ಪ ಸಮಯ ಬೇಕು. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಬೆಂಗಳೂರಿನಿಂದ ಹೋಗುವವರ ಸಂಖ್ಯೆ ಕಡಿಮೆ ಇದೆ. ಈಗ ಮಜಂದೂರ್ ಷಾ ಈ ಮಾತು ಆಡುವ ಅವಶ್ಯಕತೆ ಇರಲಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.