Lokayukta raids: ಅಕ್ರಮ ಆಸ್ತಿ ಗಳಿಕೆ ಆರೋಪ: ಬೆಂಗಳೂರು ಸೇರಿ ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೆಡಿಕಲ್ ಅಧಿಕಾರಿ- ಮಂಜುನಾಥ್, ಜಿ. ವಿ. ಪಿ.ಯು ಬೋರ್ಡ್ ನಿರ್ದೇಶಕಿ ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಮನೆ ಮೇಲೆ ದಾಳಿ ನಡೆಸಲಾಗಿದೆ.

ಕೆಂಗೇರಿ ಸ್ಯಾಟಲೈಟ್ ಟೌನ್‌ನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ನಿರ್ದೇಶಕಿ ಸುಮಂಗಲಿ ಅವರ ನಿವಾಸದ ಮೇಲೆ 20ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಂಗಲಿ ಅವರು ಸದ್ಯ ಅಮಾನತಿನಲ್ಲಿದ್ದರೂ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಅವರ ಮೇಲಿದೆ. ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ್ ಅವರ ಅನ್ನಪೂರ್ಣೇಶ್ವರಿ ನಗರದ ಮನೆ ಮೇಲೂ ಸುಮಾರು 10ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಸರ್ವೇಯರ್ ಗಂಗಾ ಮರಿಗೌಡ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಬೀದರ್‌ನಲ್ಲೂ ದಾಳಿ
ಬೀದರ್‌ ಜಿಲ್ಲೆಯಾದ್ಯಂತ ಒಟ್ಟು 4 ಕಡೆ ದಾಳಿ ಮಾಡಲಾಗಿದೆ. ಔರಾದ್ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ಎಂಬ ಅಧಿಕಾರಿಯ ನಿವಾಸ, ಬೀದರ್ ನಗರದ ಗುರುನಾನಕ್ ಕಾಲೋನಿಯ ನಿವಾಸ, ಭಾಲ್ಕಿಯ ಕಡ್ಯಾಳ ಗ್ರಾಮದ ನಿವಾಸ, ಔರಾದ್‌ನ ಎಡಿ ಆಫೀಸ್ ಮತ್ತು ಔರಾದ್‌ನ ಮುದೋಳ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ 4 ಕಡೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.

ಚಿತ್ರದುರ್ಗದಲ್ಲೂ ದಾಳಿ
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಚಿತ್ರದುರ್ಗ ಕೃಷಿ ಇಲಾಖೆ ಎಡಿ (ಹೆಚ್ಚುವರಿ ನಿರ್ದೇಶಕ) ಚಂದ್ರಕಾಂತ್‌ ಅವರಿಗೆ ಸೇರಿದ 2 ಮನೆ ಮತ್ತು ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ದಾವಣಗೆರೆಯಲ್ಲೂ ದಾಳಿ
ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆದಿದೆ. ಕೆಆರ್ ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್​ಡಿಎ ನಿವಾಸಗಳ ಮೇಲೆ ದಾಳಿ​ ನಡೆದಿದೆ. ದಾವಣಗೆರೆ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

Rakesh arundi

Leave a Reply

Your email address will not be published. Required fields are marked *