Congress: ನಾನು ಮುಖ್ಯಮಂತ್ರಿ ಆಗಿದ್ದರೆ ಗ್ಯಾರಂಟಿ ಅನುಷ್ಠಾನ ಮಾಡುತ್ತಿರಲಿಲ್ಲ- ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ವ್ಯಂಗ್ಯ
ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ ಎಂದು ಹೇಳಿದರೆ.
ಸರ್ಕಾರ ಜಾರಿಗೆ ತಂದಿರುವ ಯೋಜನೆ ಒಂದಾ ಎರಡಾ. ಉಚಿತ ಬಸ್ ಯೋಜನೆಯಿಂದ ಬರೀ ಮಹಿಳೆಯರೇ ಎಲ್ಲಿ ನೋಡಿದ್ರೂ ಬಸ್ ನಲ್ಲಿ ಮಹಿಳೆಯರೇ ಇರುತ್ತಾರೆ. ಸರ್ಕಾರಿ ಬಸ್ ನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ ಯಾರಾದರೂ 4ಜನ ಗಂಡಸರು ಹೋಗೋದೇ ಕಷ್ಟ. ಇಂತಹ ಯೋಜನೆಗಳನ್ನ ಸಿದ್ದರಾಮಯ್ಯ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ತೊಗರಿ ಸೇರಿದಂತೆ ಬೇರೆ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ. ಸಿಎಂ ಏನೇನೋ ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದು ಶಾಸಕ ಆರ್.ವಿ ದೇಶಪಾಂಡೆ ಲೇವಡಿ ಮಾಡಿದರು.