Belagavi: ಪ್ರಿಯಕನ ಜೊತೆ ಮಗಳು ಪರಾರಿ: ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ!

ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ಪ್ರಿಯಕರನೊಂದಿಗೆ ಓಡಿ ಹೋದಳೆಂದು ವ್ಯಕ್ತಿಯೋರ್ವ ಮಗಳ ತಿಥಿ ಮಾಡಿ ಇಡೀ ಊರಿಗೆ ಊಟ ಹಾಕಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗದ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಅವರ ಪುತ್ರಿ ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಶಿವಗೌಡ ಸೇರಿದಂತೆ ಆಕೆಯ ಮನೆಯವರು ಇದನ್ನು ವಿರೋಧಿಸುತ್ತಿದ್ದರು. ಇಂಥ ಸಂದರ್ಭದಲ್ಲೇ ಶಿವಗೌಡ ಮಗಳು ವಿಠ್ಠಲ್ ಬಸ್ತವಾಡೆ ಜತೆ ಓಡಿ ಹೋಗಿದ್ದಾಳೆ.

ಮಗಳು ಮನೆಗೆ ಬಾರದಿದ್ದಾಗ ಗಾಬರಿಗೊಂಡ ಶಿವಗೌಡ ಅವರು ನಾಪತ್ತೆ ದೂರು ದಾಖಲಿಸಿದರು. ಬಳಿಕ ಅವರಿಗೆ ತಮ್ಮ ಪುತ್ರಿ ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವ ವಿಷಯ ಗೊತ್ತಾಯಿತು. ಇದರಿಂದ ಮನನೊಂದ ಅವರು ಮಗಳು ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ತಿಥಿ ಮಾಡಿ ಊರವರನ್ನು ಕರೆದುಊಟ ಹಾಕಿಸಿದ್ದಾರೆ.

ಶಿವಗೌಡಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು, ಈ ಪೈಕಿ ಈಗ ಓಡಿಹೋದವಳು ಕೊನೆಯವಳಾಗಿದ್ದಳು. ಮಗಳು ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರುವ ಶಿವಗೌಡ ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿದ್ದಾರೆ. ಅಲ್ಲದೇ ಮಗಳ ಫೋಟೊಗೆ ಹಾರ ಹಾಕಿ ಊರ ತುಂಬ ಶ್ರದ್ಧಾಂಜಲಿ ಬ್ಯಾನರ್​ಗಳನ್ನೂ ಹಾಕಿಸಿದ್ದಾರೆ. ಜತೆಗೆ ಸಂಬಂಧಿಕರನ್ನು, ಊರವರನ್ನು ಕರೆದು ತಿಥಿಯೂಟ ಹಾಕಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *