Bengaluru: ಲಾಡ್ಜ್ನಲ್ಲಿ ಬೆಂಕಿಗೆ ಯುವಕ ಯುವತಿ ಸಾವು: ತನಿಖೆಯಲ್ಲಿ ಹೊರಬಿತ್ತು ಸ್ಫೋಟಕ ಸಂಗತಿ!
ರಾಜಧಾನಿ ಬೆಂಗಳೂರಿನ ಯಲಹಂಕ ನ್ಯೂಟೌನ್ನ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್ನಲ್ಲಿರುವ ಲಾಡ್ಜ್ನಲ್ಲಿ ನಡೆದ ಬೆಂಕಿ ದುರುಂತದಲ್ಲಿ ಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ದಾರುಣ ಘಟನೆಯಲ್ಲಿ ಮೃತಪಟ್ಟವರು ಹುನಗುಂದ ಮೂಲದ ಕಾವೇರಿ ಬಡಿಗೇರ್ ಮತ್ತು ಗದಗ ಮೂಲದ ರಮೇಶ್ ಎಂದು ಗುರುತಿಸಲಾಗಿದೆ.
ಒಂದು ವಾರದಿಂದ ರಮೇಶ್ ಮತ್ತು ಕಾವೇರಿ ಇದೇ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದರು. ಕಾವೇರಿ ಬಡಿಗೇರ್ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದರು. ಕೆಲಸದ ಸಲುವಾಗಿ ಗಂಡ ಮಕ್ಕಳನ್ನ ಊರಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಗಾರೇ ಕೆಲಸ ಮಾಡುತ್ತಿದ್ದ ರಮೇಶನ ಪರಿಚವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಹೀಗಾಗಿ ಈ ಜೋಡಿ ಲಾಡ್ಜ್ನಲ್ಲಿ ರೂಮ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ರಮೇಶ್ ಜೊತೆಗಿನ ಅನೈತಿಕ ಸಂಬಂಧವೇ ಈ ದುರಂತಕ್ಕೆ ಕಾರಣವಾಗಿದೆ. ರಮೇಶ್, ಕಾವೇರಿಯನ್ನು ಮದುವೆಯಾಗಲು ಒತ್ತಾಯ ಮಾಡುತ್ತಿದ್ದ, ಈ ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ರಮೇಶ್, ತಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು. ನಂತರ ರಮೇಶ ಪೆಟ್ರೋಲ್ ಸುರಿದುಕೊಂಡು ಮೇನ್ ಡೋರ್ ಲಾಕ್ ಮಾಡಿದ್ದಾನೆ. ಈ ಭಯದಿಂದ ಕಾವೇರಿ, ಲಾಡ್ಜ್ನ ವಾಶ್ರೂಂಗೆ ಓಡಿಹೋಗಿ ಬಾಗಿಲು ಲಾಕ್ ಮಾಡಿಕೊಂಡು ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.
ಅಷ್ಟರಲ್ಲಾಗಲೇ ರಮೇಶ್ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ, ಬೆಂಕಿ ಇಡೀ ರೂಂ ವ್ಯಾಪಿಸಿದೆ. ಬೆಂಕಿಯಿಂದ ರಮೇಶ್ ಸಾವನ್ನಪ್ಪಿದರೆ, ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಮೃತಪಟ್ಟಿದ್ದಾಳೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
—–