Ed Raids: ಐಷಾರಾಮಿ ಕಾರು ಕಳ್ಳಸಾಗಣೆ: ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ
ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ, ದುಲ್ಕರ್ ಸಲ್ಮಾನ್ , ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಈ ನಟರಿಗೆ ಸೇರಿದ ನಿವಾಸಗಳು ಸೇರಿದಂತೆ 17 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಎರ್ನಾಕುಲಂ, ತ್ರಿಶೂರ್, ಕೋ-ಝಿಕ್ಕೋಡ್. ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿ ದಾಳಿ ನಡೆಸಲಾಗಿದೆ.
ಭೂತಾನ್ ಮತ್ತು ನೇಪಾಳದಿಂದ ಅಕ್ರಮ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್‌ಗಳು, ಡಿಫೆಂಡರ್‌ಗಳು ಮತ್ತು ಮಸೆರಾಟಿಸ್ ನಂತಹ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ವಾಹನಗಳ ಮಾಲೀಕರು, ಆಟೋ ವರ್ಕ್ಶಾಪ್‌ಗಳು ಮತ್ತು ಡೀಲರ್‌ಗಳು ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ನಕಲಿ ದಾಖಲೆಗಳನ್ನು ಬಳಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳ ವಾಹನ ನೋಂದಣಿ ಪಡೆದುಕೊಂಡು ಅಕ್ರಮವಾಗಿ ಸಿನಿಮಾ ನಟರಿಗೆ, ಉದ್ಯಮಿಗಳಿಗೆ ಕಾರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.