“ದೈವದ ಹೆಸ್ರಲ್ಲಿ ದುಡ್ಡು ಮಾಡಿದ್ರೆ, ಆಸ್ಪತ್ರೆಗೆ ಸುರಿಸ್ತೀನಿ”- ʼಪಿಲ್ಚಂಡಿ ದೈವʼ
ಕಾಂತಾರಾ ಸಿನಿಮಾ ಏನೋ ಕೋಟಿ ಕೋಟಿ ಹಣ ಗಳಿಸಿತು. ಆದ್ರೆ, ಕೋಟ್ಯಂತರ ಭಕ್ತಾಧಿಗಳ ಭಕ್ತಿ ಮಾರಾಟ ಆಯ್ತು ಅನ್ನೋ ಮಾತುಗಳು ಈಗ ಎಲ್ಲೆಡೆ ಚರ್ಚೆ ಹುಟ್ಟು ಹಾಕಿವೆ. ಸೋಶಿಯಲ್ ಮೀಡಿಯಾದಲ್ಲಿ ತುಳು ನಾಡ ದೈವದ ರೀತಿಯಲ್ಲಿ ವೇಷ ಧರಿಸಿಕೊಂಡು, ವೀವ್ಸ್, ಫಾಲೋವರ್ಸ್‌ಗಳಿಗಾಗಿ ಹುಚ್ಚಾಟ ಮೆರೆಯುತ್ತಿರೋ ಅನೇಕ ಕಿಡಿಕೇಡಿಗಳು ಈಗಾಗ್ಲೇ ವಿಕೃತಿ ಮೆರೆದು ಅನೇಕ ಭಕ್ತರ ವಿರೋಧಕ್ಕೂ ಕಾರಣವಾಗಿದ್ದಾರೆ.
ಇನ್ನೊಂದ್ಕಡೆ ಈ ರೀತಿ ಇನ್ನು ಮುಂದೆ ಮಾಡೋದಿಲ್ಲ ಅಂತಾ ಕ್ಷಮೆ ಕೂಡ ಕೇಳಿದ್ದಾರೆ. ದೈವದ ರೀತಿ ಅನುಕರಣೆ ಮಾಡುವ ಭರದಲ್ಲಿ ಹುಚ್ಚು ಬಂದ ರೀತಿಯಲ್ಲಿ ಕೂಗೋದು, ಮನಸ್ಸಿಗೆ ಬಂದ ಹಾಗೆ ಆಡೋದು. ಅಲ್ಲಿನ ಆಚರಣೆ, ಸಂಸ್ಕ್ರತಿಯ ಗಂಧ ಗಾಳಿ ಗೊತ್ತಿಲ್ಲದೆ ಇರೋ ವ್ಯಕ್ತಿಗಳೆಲ್ಲಾ ಮೈ ಮೇಲೆ ದೈವ ಬಂದ ಹಾಗೆ ಹುಚ್ಚರ ರೀತಿಯಲ್ಲಿ ವರ್ತಿಸೋದು. ಈ ಎಲ್ಲಾ ದೃಶ್ಯಗಳು ಇದೀಗ ಕರಾವಳಿ ಭಾಗದ ಜನರಿಗೆ ಬೇಸರ ತರಿಸಿದೆ. ಈ ನಡುವೆ ಪ್ರಾರ್ಥನೆ ಮಾಡಲು ಹೋಗಿದ್ದ ದೈವಾರಾಧಕರಿಗೆ ಪಿಲ್ಚಂಡಿ ದೈವದ ನುಡಿ ಅಭಯ ನೀಡಿದ್ದು ಮತ್ತೆ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.
ಒಂದು ಕಡೆ ರಿಷಬ್ ಶೆಟ್ಟಿಗೂ ಪರೋಕ್ಷವಾಗಿ ದೈವ ಎಚ್ಚರಿಕೆ ಕೊಟ್ಟಿದೆಯಾ ಅನ್ನೋ ಅನುಮಾನಗಳು ಮೂಡ್ತಿವೆ. ನಿಮ್ಮ ಹಿಂದೆ ನಾನಿದ್ದೇನೆ ಹೋರಾಟ ಮುಂದುವರೆಸಿ ಎಂದು ನೋವು ತೋಡಿಕೊಂಡ ಭಕ್ತಾಧಿಗಳಿಗೆ ಪಿಲ್ಚಂಡಿ ದೈವ ಧೈರ್ಯ ನೀಡಿದೆ. ಪ್ರಾರ್ಥನೆ ಮುಗಿದ ಬಳಿಕ ದೈವ ನುಡಿದ ಮಾತುಗಳನ್ನು ದೈವಾರಾಧಕ ಶ್ರೀಧರ್ ಕವತ್ತಾರ್ ತಿಳಿಸಿದ್ದು, ದೈವಕ್ಕೆ ಅಪಹಾಸ್ಯ ಮಾಡ್ತಿರೋ ಘಟನೆಗಳಿಂದ ಬೇಸರವಾಗಿದೆ. ಬೇರೆಯವ್ರು ಮಾಡಿದ ತಪ್ಪನ್ನು ತುಳುವರು ಮಾಡಬೇಡಿ. ನನ್ನ ಹೆಸ್ರಲ್ಲಿ ಯಾರೆಲ್ಲಾ ಹಣ ಮಾಡಿಕೊಳ್ತಾ ಇದ್ದಾರೋ ಅವ್ರನ್ನು ನಾನೇ ನೋಡಿಕೊಳ್ತೀನಿ ಎಂದು ಎಚ್ಚರಿಕೆ ನೀಡಿದೆ ಎಂದು ಹೇಳಿದರು.
ಇಷ್ಟು ಮಾತ್ರವಲ್ಲದೆ ಪುಕ್ಕಟೆ ದೈವ ಭಕ್ತಿಯಿಂದ ನನ್ನ ಹೆಸ್ರು ಬಳಸಿಕೊಂಡು ಹಣ ಮಾಡುವವರು ಮಾಡಲಿ, ಗಳಿಸಿದ ಹಣವನ್ನೆಲ್ಲಾ ಆಸ್ಪತ್ರೆ ಸೇರುವಂತೆ ನಾನು ಮಾಡುತ್ತೇನೆ. ಅಪಚಾರ ಯಾರೆಲ್ಲಾ ಮಾಡ್ತಾರೋ ಅದಕ್ಕೆಲ್ಲಾ ನಾನು ತಕ್ಕ ಪಾಠ ಕಲಿಸ್ತೀನಿ. ಇನ್ನು ಮುಂದೆ ದೇವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರೆಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೀನಿ ಎಂದು ತುಳು ಸಂಸ್ಕೃತಿಗೆ ಅವಮಾನ ಮಾಡ್ತಿರೋ ಎಲ್ಲರ ವಿರುದ್ಧ ಹೋರಾಟ ಮಾಡ್ತಿರೋರಿಗೆ ಅಭಯ ಹಸ್ತವನ್ನು ದೈವ ನೀಡಿದೆ. ಇನ್ನು ಮುಂದುವರೆದು ನಟನನ್ನೇ ದೈವವಾಗಿ ಆರಾಧಿಸೋ ಅವಿವೇಕಿಗಳು ಸಹ ಸಮಾಜದಲ್ಲಿ ಇದ್ದಾರೆ. ಯಾರೇ ಅಪಹಾಸ್ಯ ಮಾಡಿದ್ರೂ ವಿರೋಧಿಸುತ್ತೇವೆ ಎಂದು ಶ್ರೀಧರ್ ಕವತ್ತಾರ್ ತಿಳಿಸಿದ್ದಾರೆ.
‘ಕಾಂತಾರ’ ಸಿನಿಮಾನಲ್ಲಿ ದೈವಾರಾಧನೆಯನ್ನು ಬಳಕೆ ಮಾಡಿರುವುದಕ್ಕೆ ಹಾಗೂ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ ಮತ್ತು ಪಿಲಿ ದೈವಗಳ ಬಳಕೆ ಮಾಡಿರುವುದಕ್ಕೆ, ದೈವದ ಆವೇಶ ಮತ್ತು ದೈವ ನರ್ತನದ ಬಳಕೆಯ ಬಗ್ಗೆ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದು, ದೈವಭಕ್ತಿಯೂ ಕೂಡ ಕಮರ್ಷಿಯಲ್ ಆಗಿದ್ದನ್ನೇ ಈ ಪರಿಯಾಗಿ ವಿರೋಧ ವ್ಯಕ್ತಪಡಿಸ್ತಿದ್ದಾರೆ. ದೈವಾರಾಧಕರು ಸಿನಿಮಾದ ವಿರುದ್ಧ ದೈವಕ್ಷೇತ್ರದಲ್ಲಿ ದೂರು ನೀಡಲಿದ್ದಾರೆ. ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಥಿಯೇಟರ್‌ಗಳಲ್ಲಿ ದೇವರು ಬಂದಂತೆ ನಟಿಸೋದು ಕಿರುಚೋದು ಈ ಎಲ್ಲಾ ಹುಚ್ಚು ವರ್ತನೆಗಳ ವಿರುದ್ಧ ಮಂಗಳೂರಿನ ಹೊರವಲಯದ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೇವಸ್ಥಾನಗಳಲ್ಲಿ ದೈವನರ್ತಕರು, ದೈವಾರಾಧಕರಿಂದ ಸಾಮೂಹಿಕ ಪ್ರಾರ್ಥನೆ ಕೂಡ ನಡೀತಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ದೈವವೇ ತಕ್ಕ ಪಾಠ ಕಲಿಸುವಂತೆ ಪೂಜೆ ಕೂಡ ನಡೆಯಲಿದೆ.
ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ. ದೈವದ ಬಳಿ ದೂರು ನೀಡುವುದು ಕರಾವಳಿ, ಮಲೆನಾಡು ಭಾಗದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆಯಾಗಿದ್ದು ದೈವದ ಬಳಿಯೇ ಇಂತವ್ರ ವಿರುದ್ಧ ಕ್ರಮಕ್ಕೆ ಮುಂದಾಗಲಿದ್ದಾರೆ.
ಇತ್ತ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಬಗ್ಗೆ ಚರ್ಚೆ ಮಾಡ್ತಿದ್ದು, ‘ಕಾಂತಾರ’ ಸಿನಿಮಾ ನೋಡಿ ದೈವದ ಅನುಕರಣೆ ಮಾಡುತ್ತಿದ್ದಾರೆ ಅದು ತಪ್ಪು ಎಂದು ಹೇಳುತ್ತಿರುವವರು, ಸಿನಿಮಾನಲ್ಲಿ ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡಿದ್ದು ತಪ್ಪು ಎನಿಸಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾಗಳು ಹುಟ್ಟಿದ್ದು ಈಗ ಆದರೆ ಸೂರ್ಯ-ಚಂದ್ರರ ಹುಟ್ಟಿನಿಂದಲೂ ನಮ್ಮ ಹಿರಿಯರು ದೈವದ ಆರಾಧನೆ ಮಾಡುತ್ತಲೇ ಬರುತ್ತಿದ್ದಾರೆ. ಸಿನಿಮಾಗಳಿಂದ ದೈವದ ಆರಾಧನೆಗೆ ಮಹತ್ವ ಸಿಕ್ಕಿತೆಂಬುದು ಸುಳ್ಳು’ ಎಂದು ಕೆಲವರು ದೈವಾರಾಧನೆಯ ಮಹತ್ವವವನ್ನು ಹೇಳಿದ್ದಾರೆ.
‘ಕಾಂತಾರ’ ಸಿನಿಮಾ ಏನೋ ಕೋಟಿ-ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತರ ಭಕ್ತಿ ಮಾರಾಟವಾಯ್ತು’ ಎಂದು ವ್ಯಂಗ್ಯವಾಡ್ತಿರೋದೆ ಈ ಎಲ್ಲಾ ಬೆಳವಣಿಗೆಗಳಿಂದಾಗಿ. ಇತ್ತ ಗುರುವಾರದ ವೇಳೆಗೆ, ‘ಕಾಂತಾರ ಅಧ್ಯಾಯ 1’ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘ಬ್ರಹ್ಮಾಸ್ತ್ರ’ (₹431 ಕೋಟಿ) ಮತ್ತು ‘3 ಈಡಿಯಟ್ಸ್’ (₹450 ಕೋಟಿ) ಸಿನಿಮಾಗಳ ಜೀವಮಾನದ ಕಲೆಕ್ಷನ್ ಅನ್ನು ಮೀರಿಸಿದೆ ಅನ್ನೋ ಅಪ್ಡೇಟ್ಸ್ ಕೂಡ ಸಿಗ್ಥಾ ಇದೆ. ಈ ನಡುವೆ ಚಿತ್ರಮಂದಿರಗಳಲ್ಲಿ ಈ ರೀತಿ ವರ್ತಿಸೋ ಹುಚ್ಚು ಅಭಿಮಾನಿಗಳನ್ನು ಕಂಟ್ರೋಲ್ ಮಾಡಬೇಕಾದ ಅನಿವಾರ್ಯತೆಯ ಇಕ್ಕಟ್ಟಿನಲ್ಲಿ ಚಿತ್ರತಂಡ ಸಿಲುಕಿದೆ.
ಕಾಂತಾರ ಸಿನಿಮಾ ತುಳು ನಾಡ ಸಂಸ್ಕೃತಿಗೆ ಹಿಡಿದ ಕೈ ಗನ್ನಡಿ. ಆರಂಭದಿಂದಲೂ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿರೋ ರಿಷಬ್ ರ ಸಿನಿಮಾಕ್ಕೆ ದೈವದ ಅಭಯ ಸಿಕ್ಕಿತ್ತು. ಸಿನಿಮಾಕ್ಕೆ ನನ್ನ ಅಭಯವಿದೆ ಅಂತ ನುಡಿದಿದ್ದ ದೈವ ಅದೇ ರೀತಿ ಸಂಕಷ್ಟಗಳಿಂದ ಪಾರು ಮಾಡಿ ಅಂದುಕೊಂಡ ಸಮಯಕ್ಕೆ ಥಿಯೆಟರ್ ಗೆ ಬರುವಂತೆ ಮಾಡಿದೆ. ಇನ್ನು ಹಲವರು ಶೂಟಿಂಗ್ ವೇಳೇಯೇ ಪ್ರಾಣ ಬಿಟ್ಟಿರೋದ್ರಿಂದ ಹಲವು ಆತಂಕಗಳು ಕಾಡ್ತಿವೆ.
ತುಳು ಕೂಟದಿಂದ ರಿಷಬ್ ಶೆಟ್ಟಿಗೆ ಮನವಿ ಪತ್ರ
ರಿಷಬ್ ಶೆಟ್ಟಿ ಅವರೇ ನೀವು ದೈವಗಳಲ್ಲಿ ಅಪಾರ ನಂಬಿಕೆ ಇರುವವರು ಎಂದು ಹಲವು ಬಾರಿ ಹೇಳಿಕೊಂಡಿದ್ದೀರಿ. ನೀವು ದೈವದ ಬಗ್ಗೆ ಸಿನಿಮಾ ಮಾಡಿದ್ದೀರಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿ ಎಂದು ತುಳು ಕೂಟ ಒತ್ತಾಯ ಮಾಡಿದೆ.
ಇವುಗಳನ್ನ ಸೋಷಿಯಲ್ ಮಿಡಿಯಾದಲ್ಲಿ ನೋಡಿ ರೋಸಿ ಹೋಗಿದ್ದೇವೆ. ಇವೆಲ್ಲವನ್ನೂ ನೋಡಿ ನೀವೇಕೆ ಮೌನವಾಗಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಸಿನಿಮಾ ಪ್ರದರ್ಶನಕ್ಕೆ ಮುಂಚೆ ಈ ಬಗ್ಗೆ ಒಂದು ಡಿಸ್ಕ್ಲೇಮರ್ (ಎಚ್ಚರಿಕೆ) ಹಾಕಿ ಎಂದು ಈ ಹಿಂದೆಯೇ ಮನವಿ ಮಾಡಿದ್ದೆವು. ಆದರೆ ಈ ಬಗ್ಗೆ ನಿಮಗೆ ಯಾಕೆ ಅಷ್ಟೋಂದು ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ. ದೈವಾರಾದನೆ ನಮ್ಮ ನಂಬಿಕೆ. ಕೂಡಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸಿ ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಡಿಸ್ಕ್ಲೇಮರ್ ಹಾಕಿ’ ಎಂದು ತುಳುಕೂಟ ಆಗ್ರಹಿಸಿದೆ.
ತುಳು ಸಮುದಾಯದ ಧಾರ್ಮಿಕ ಭಾವನೆಗಳು ಮತ್ತು ನಂಬಿಕೆಯನ್ನು ತೀವ್ರವಾಗಿ ನೋಯಿಸ್ತಾ ಇದೆ. ಆದ್ದರಿಂದ ಹೊಂಬಾಳೆ ಫಿಲ್ಮ್ಸ್ ಸಾರ್ವಜನಿಕರಿಗೆ ಮತ್ತು ಪ್ರೇಕ್ಷಕರಿಗೆ ದೈವ ವ್ಯಕ್ತಿಗಳನ್ನು ಅನುಕರಿಸುವ ಅಥವಾ ಕ್ಷುಲ್ಲಕಗೊಳಿಸುವ ಯಾವುದೇ ಕೃತ್ಯದಿಂದ ದೂರವಿರಲು ಪ್ರಾಮಾಣಿಕ ಮನವಿ ಮಾಡುತ್ತದೆ. ಅದು ಸಿನಿಮಾ ಹಾಲ್‌ಗಳಲ್ಲಿರಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರಲಿ ಅನುಕರಿಸಬೇಡಿ ಅಂತ ಮನವಿ ಮಾಡಿದೆ.
ಇತ್ತ ಹೊಂಬಾಳೆ ಫಿಲ್ಮ್ಸ್ ಕೂಡ ಮನವಿ ಮಾಡಿಕೊಂಡಿದೆ.
ದೈವಾರಾಧನೆಯ ಪವಿತ್ರ ಸ್ವರೂಪವನ್ನು ಯಾವಾಗಲೂ ಎತ್ತಿಹಿಡಿಯಬೇಕು. ಈ ಚಿತ್ರಣಗಳ ಆಧ್ಯಾತ್ಮಿಕ ಮಹತ್ವವನ್ನು ಗುರುತಿಸಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾವು ಎಲ್ಲಾ ಅಭಿಮಾನಿಗಳಲ್ಲಿ ಒತ್ತಾಯಿಸುತ್ತೇವೆ. ನಾವು ಆಚರಿಸಲು ಪ್ರಯತ್ನಿಸಿದ ಭಕ್ತಿಯನ್ನು ಎಂದಿಗೂ ರಾಜಿ ಮಾಡಿಕೊಳ್ಳಬಾರದು ಅಥವಾ ಹಗುರವಾಗಿ ಪರಿಗಣಿಸಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪಾವಿತ್ರ್ಯವನ್ನು ಕಾಪಾಡುವಲ್ಲಿ ನಿಮ್ಮ ನಿರಂತರ ಬೆಂಬಲ ಮತ್ತು ಸಹಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿದೆ.