Shivamoga Airport: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೃಹತ್ ಮಾಲ್ , ಹೋಟೆಲ್ ನಿರ್ಮಾಣ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಲಾಗಿದ್ದ ವಿಶಾಲವಾದ 780 ಎಕರೆ  ಭೂ ಪ್ರದೇಶದಲ್ಲಿ ಸುಮಾರು 111 ಎಕರೆ ಜಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಾಲ್, ವಾಣಿಜ್ಯ ಸಂಕೀರ್ಣ, ಪಂಚತಾರಾ ಹೋಟೆಲ್, ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಅವಲೋಕಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಅನುಕೂಲವಾಗುವ ಮಾಲ್, ವಾಣಿಜ್ಯ ಸಂಕೀರ್ಣ ನಿರ್ಮಿಸಿ 30 ವರ್ಷಗಳಿಗೆ ಗುತ್ತಿಗೆ ನೀಡಲಾಗುವುದು. ಈ ಬಗ್ಗೆ ಅ.17ರಂದು ನಡೆಯುವ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರಸ್ತುತ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಹಗಲು ಮಾತ್ರ ವಿಮಾನಯಾನ ಸೇವೆ ಲಭ್ಯವಿದ್ದು ಮುಂದಿನ ನಾಲ್ಕಾರು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೂ ಕ್ರಮ ಕೈಗೊಳ್ಳಲಾಗುವುದು. ನಿಲ್ದಾಣದಲ್ಲಿ ಬಾಕಿ ಇರುವ ಕೆಲವು ಸಿವಿಲ್ ಕಾಮಗಾರಿಗಳು, ಲೈಟಿಂಗ್ ವ್ಯವಸ್ಥೆ ಮತ್ತು ನೈಟ್ ಲ್ಯಾಂಡಿಂಗ್ ಗೆ ಸಂಬಂಧಿಸಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ತನಿಖಾ ತಂಡ ಸೂಚಿಸುವ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸದ ಕಾರಣ ಕಳೆದ ಬಾರಿ ವಿಧಿಸಿದ್ದ 30ಲಕ್ಷ ರೂ. ದಂಡ ಪಾವತಿ ಬಾಕಿ ಇದ್ದು, ಶೀಘ್ರದಲ್ಲೆಪಾವತಿಗೆ ಕ್ರಮ ವಹಿಸಲಾಗುವುದು. ಈ ಹಿಂದೆ ತನಿಖಾ ತಂಡ ಗುರುತಿಸಿದ್ದ ಎಲ್ಲಲೋಪಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಈ ಬಾರಿ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಣ ಖಚಿತವಾಗಿದೆ ಎಂದರು.

ವಿಮಾನ ಸಂಚಾರ ಆರಂಭಗೊಂಡ ಮೊದಲ ವರ್ಷ 17 ಸಾವಿರ, 2ನೇ ವರ್ಷ 92 ಸಾವಿರ ಹಾಗೂ ಪ್ರಸಕ್ತ ಸಾಲಿನಲ್ಲಿ1.10 ಲಕ್ಷ ಪ್ರಯಾಣಿಕರು ವಿಮಾನದಲ್ಲಿ ಸಂಚರಿಸಿದ್ದಾರೆ. ಶಿವಮೊಗ್ಗ ಸುತ್ತಮುತ್ತಲು ಸಂಚಾರಕ್ಕೆ ವಿಮಾನ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೆ ಇದೆ. ಬೆಂಗಳೂರು, ಹೈದರಾಬಾದ್ , ತಿರುಪತಿ, ಗೋವಾ, ಚೆನ್ನೈಗೆ ಮಾತ್ರ ವಿಮಾನ ಸೇವೆ ಇದೆ. ಶೀಘ್ರದಲ್ಲೆ ದೇಶದ ಮತ್ತಷ್ಟು ನಗರಗಳಿಗೆ ವಿಮಾನ ಸೇವೆ ವಿಸ್ತರಿಸಲಾಗುವುದು ಎಂದರು.

ಈ ಹಿಂದೆ ವಿಮಾನ ನಿಲ್ಧಾಣಕ್ಕೆ ಭೂಪ್ರದೇಶವನ್ನು ಬಿಟ್ಟುಕೊಟ್ಟ 371 ಭೂಮಾಲೀಕರಿಗೆ ನಿವೇಶನವನ್ನು ನೀಡಲು ಸರ್ಕಾರವು ಒಪ್ಪಿಕೊಂಡಿತ್ತು. ಈ ಬಗ್ಗೆ ಭೂಮಾಲೀಕರು ಅನೇಕ ಬಾರಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು. ಇಂದಿನಿಂದ ಪುನಃ ತಮ್ಮ ಬೇಡಿಕೆಯ ಈಡೇರಿಗೆ ಆಗ್ರಹಿಸಿ, ವಿಮಾನ ನಿಲ್ದಾಣದ ಎದುರು ಅನಿರ್ಧಿಷ್ಟಾಧಿ ಧರಣಿ ನಡೆಸುತ್ತಿರುವುದು ತಿಳಿದಿದ್ದು, ಸಂತ್ರಸ್ಥ ಕುಟುಂಬದವರಿಗೆ ನಿವೇಶನ ನೀಡಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Rakesh arundi

Leave a Reply

Your email address will not be published. Required fields are marked *