Tumakur: ಮಾರ್ಕೋನಹಳ್ಳಿ ಡ್ಯಾಂನಲ್ಲಿ ದುರಂತ: ಕೊಚ್ಚಿ ಹೋದ ಒಂದೇ ಕುಟುಂಬದ 6 ಜನ
ಮಾರ್ಕೋನಹಳ್ಳಿ ಡ್ಯಾಂ ನೀರಿನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಆರು ಮಂದಿ ನೀರುಪಾಲಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರುನಲ್ಲಿ ನಡೆದಿದೆ. ಕೊಚ್ಚಿಕೊಂಡು ಹೋಗಿದ್ದ, ಏಳು ಮಂದಿ ಪೈಕಿ ಒಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದ್ದು ನಾಲ್ವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸಾಜಿಯಾ, ಅರ್ಬಿನ್ ಮೃತರು. ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಬ್ (1) ಕಣ್ಮರೆಯಾದವರು. ಇನ್ನು ನವಾಜ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ತುಮಕೂರು ನಗರದ ಬಿ.ಜಿ.ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆ ಆಗಿರುವ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.