Bigg Boss Kannada: ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ, ಮನೆ ಖಾಲಿ ಮಾಡುವಂತೆ ಸೂಚನೆ
ಕಿರುತರೆಯ ಅತ್ಯಂತ ಜನಪ್ರಿಯ ಶೋ ಕನ್ನಡದ ಬಿಗ್ ಬಾಸ್ 12ನೇ ಆವೃತ್ತಿ ಶುರುವಾದ ಒಂದೇ ವಾರಕ್ಕೆ ಸಂಕಷ್ಟಕ್ಕೆ ಸಿಲುಕಿದೆ. ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಲಾಗಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು, ಸ್ಟುಡಿಯೋಗೆ ಬೀಗ ಹಾಕಲಾಗಿದೆ.
ರಾಮನಗರ ತಹಶೀಲ್ದರ್ ತೇಜಸ್ವಿನಿ ಅವರ ಜೊತೆ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ. ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು 7.30 ರವರೆಗೆ ಸಮಯ ನೀಡಲಾಗಿದೆ. ಒಂದೇ ವೇಳೆ ಬಿಗ್ ಬಾಸ್ ಸ್ಪರ್ಧಿಗಳು ಹೊರಬಂದರೆ ರಿಯಾಲಿಟಿ ಶೋ ಸ್ಥಗಿತಗೊಳ್ಳಲಿದೆ.
ಪರಿಸರ ನಿಯಮ ಉಲ್ಲಂಘನೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಅನುಮತಿ ಪಡೆದಿಲ್ಲ ಹಾಗೂ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಇದೀಗ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಬೀಗ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಸ್ಪರ್ಧಿಗಳು ಇದ್ದಾರೆ. ನೂರಾರು ತಂತ್ರಜ್ಞರು ಈ ರಿಯಾಲಿಟಿ ಶೋಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರು ಬಳಕೆ ಮಾಡುತ್ತಿದ್ದು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡದ ಕಾರಣ ಬೀಗ ಜಡಿಯಲಾಗಿದ್ದು, ಬಿಗ್ ಬಾಸ್ ಶೋ ಬಂದ್ ಆಗುವ ಸೂಚನೆ ಕಾಣಿಸಿದೆ.