Kantara: ‘ಕಾಂತಾರ’ ನೋಡಿ ದೈವದ ಅನುಕರಣೆ ಮಾಡುತ್ತಿರುವ ಜನ: ರಿಷಬ್ಗೆ ತುಳುಕೂಟ ಪತ್ರ
ಕಾಂತರ ಚಾಪ್ಟರ್:1 ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಆದರೆ ಸಿನಿಮಾ ವೀಕ್ಷಣೆಗೆ ಬಂದವರು ದೈವದ ಅನುಕರಣೆ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಇದನ್ನು ತುಳುಕೂಟ ವಿರೋಧಿಸಿದ್ದು, ರಿಷಬ್ ಶೆಟ್ಟಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.
ರಿಷಬ್ ಶೆಟ್ಟಿಯವರೇ ತಾವು ದೈವದೇವರುಗಳ ಬಗ್ಗೆ ಅತಿಯಾದ ನಂಬಿಕೆ ಉಳ್ಳವರೆಂದು ಹೇಳಿರುವಿರಿ. ಹಲವು ಸಂದರ್ಶನದಲ್ಲಿ ನಾವು ಅದನ್ನು ನೋಡಿದ್ದೇವೆ. ತಾವು ದೈವದ ಬಗ್ಗೆ ಸಿನಿಮಾ ಮಾಡಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ದಯವಿಟ್ಟು ತಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ಆ ಬಗ್ಗೆ ಜಾಗೃತಿ ಮೂಡಿಸಿ.
ಕಾಂತಾರ ಬಂದಾಗಿನಿಂದ ದೈವದ ಬಗೆಗಿನ ಅನುಕರಣೆಗಳು ಹೆಚ್ಚುತ್ತಿವೆ, ಇತ್ತೀಚೆಗೆ ಥಿಯೇಟರ್ ನಲ್ಲಿ ದೈವದ ವೇಷ ಹಾಕಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಪ್ರೇಕ್ಷಕರು ಸಿನಿಮಾ ನೋಡುವಾಗಲೇ ದೈವ ಮೈಮೇಲೆ ಬಂದಂತೆ ವರ್ತಿಸಿದ ವಿಡಿಯೋ, ಸಿನಿಮಾ ನೋಡಿ ಹೊರ ಬಂದ ಬಳಿಕ ಕೂಗಾಡಿದ ದೃಶ್ಯಗಳು ಸಾಕಷ್ಟು ವೈರಲ್ ಆಗ್ತಿದೆ.
ದಿನ ಬೆಳಗಾದರೆ ಇಂತಹ ದೃಶ್ಯಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿ ರೋಸಿ ಹೋಗಿದ್ದೇವೆ. ಇವೆಲ್ಲವನ್ನೂ ನೋಡಿಯೂ ತಾವು ಯಾಕೆ ಮೌನವಾಗಿದ್ದೀರಿ ಎಂದು ತಿಳಿಯುತ್ತಿಲ್ಲ. ನಿಮ್ಮ ಚಿತ್ರ ಪ್ರದರ್ಶನದ ಮುಂಚಿತವಾಗಿ ಈ ಬಗ್ಗೆ ಡಿಸ್ಕ್ಲೇಮರ್ ಹಾಕಿ ಎಂದು ಈ ಹಿಂದೆಯೂ ಮನವಿ ಮಾಡಿದ್ದೆವು. ತಮಗೆ ಈ ಬಗ್ಗೆ ಯಾಕೆ ಅಷ್ಟೊಂದು ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ.
ದೈವಾರಾಧನೆ ನಮ್ಮ ನಂಬಿಕೆ. ಈ ವಿಚಾರದಲ್ಲಿ ಅದಷ್ಟು ಬೇಗ ತಾವು ಒಂದು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳಿ, ಚಿತ್ರ ಪ್ರದರ್ಶನಕ್ಕೆ ಮುನ್ನ Disclimer ಹಾಕಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತುಳುಕೂಟ ಆಗ್ರಹಿಸಿದೆ.