Bengaluru: ಕಾರು ರಿವರ್ಸ್ ತೆಗೆಯುವಾಗ ಚಕ್ರಕ್ಕೆ ಸಿಲುಕಿ 11 ತಿಂಗಳ ಬಾಲಕ ಸಾವು
ಕಾರು ರಿವರ್ಸ್ ತೆಗೆಯುವಾಗ ಆಕಸ್ಮಿಕವಾಗಿ ಚಕ್ರಕ್ಕೆ ಸಿಲುಕಿ 11 ತಿಂಗಳ ಪುಟ್ಟ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಗುವನ್ನು ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ.
ಮನೆ ಮಾಲೀಕರು ತಮ್ಮ ಕಾರನ್ನು ರಿವರ್ಸ್ ತೆಗೆಯುವಾಗ ಬಾಡಿಗೆದಾರರ ಮಗು ಆಕಸ್ಮಿಕವಾಗಿ ವಾಹನದ ಹಿಂದಿನಿಂದ ಬಂದಿದ್ದು, ಚಕ್ರಕ್ಕೆ ಸಿಲುಕಿ ಮಗು ಗಂಭೀರವಾಗಿ ಗಾಯಗೊಂಡಿತ್ತು. ಮನೆ ಮಾಲೀಕ, ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.