Raichur: ಕಾಂತಾರ ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರು ದುರಂತ ಸಾವು
ರಿಷಬ್ ಶೆಟ್ಟಿ ಅಭಿನಯದ ಕಾಂತಾರ: ಚಾಪ್ಟರ್ 1 ಸಿನಿಮಾ ನೋಡಲು ಹೋಗಿದ್ದ ಇಬ್ಬರು ಯುವಕರು ಮೃತಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ ಭಾನುವಾರ ನಡೆದಿದೆ.
ಮೃತ ಯುವಕರನ್ನು ವೆಂಕಟೇಶ(28) ಮತ್ತು ಯಲ್ಲಾಲಿಂಗ(28) ಎಂದು ಗುರುತಿಸಲಾಗಿದೆ. ಯುವಕರು ಕಾಂತಾರ ಸಿನಿಮಾ ನೋಡಲು ಹೋಗಿದ್ದು, ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಿ ಸಂಜೆ ಶೋಗೆ ಹೋಗೋಣ ಎಂದು ನಿರ್ಧರಿಸಿದ್ದಾರೆ.
ನಂತರ ಈಜಲೆಂದು ನಾಲೆಗೆ ಇಳಿದಿದ್ದಾರೆ. ಆದರೆ ಈಜು ಬಾರದ ಯಲ್ಲಾಲಿಂಗ ನಾಲೆಯಲ್ಲಿ ಕೊಚ್ಚಿಹೋಗಿದ್ದಾನೆ. ಸ್ನೇಹಿತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ನೀರಿನಲ್ಲಿ ಮುಳುಗಿದ್ದಾನೆ. ಇಬ್ಬರ ಮೃತದೇಹಗಳು ರಾಯಚೂರಿನ ಸಿರವಾರ ಬಳಿ ಪತ್ತೆ ಆಗಿವೆ. ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.