Mysore Dasara: ಮೈಸೂರು ದಸರಾ: ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ
ವಿಶ್ವ ವಿಖ್ಯಾತ ಮೈಸೂರು ದಸರಾ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ದಸರಾದಲ್ಲಿ ಪಾಲ್ಗೊಂಡ ಗಜಪಡೆಗೆ ಅರಮನೆಯ ಅವರಣದಲ್ಲಿ ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಶಿಬಿರಗಳಿಗೆ ಭಾವುಕವಾಗಿ ಬೀಳ್ಕೊಡಲಾಯಿತು.
ದಸರಾ ಜಂಬೂ ಸವಾರಿಯ ಅತ್ಯಂತ ಆಕರ್ಷಕ ಭಾಗವಾದ ಗಜಪಡೆಯನ್ನು ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಎಲ್ಲರೂ ಆನೆಗಳ ಜೊತೆ ಫೋಟೋ ಮತ್ತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಉತ್ಸಾಹ ತೋರಿದರು. ವಿಶೇಷವಾಗಿ, ಮಕ್ಕಳು ಆನೆಗಳನ್ನು ನೋಡಿ ಸಂತಸಗೊಂಡ ದೃಶ್ಯ ಹೃದಯಸ್ಪರ್ಶಿಯಾಗಿತ್ತು.
ಕಳೆದ 60 ದಿನಗಳಿಂದಲೂ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ಗಜಪಡೆಗೆ ಅರಣ್ಯ ಇಲಾಖೆಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. 14 ಆನೆಗಳಿಗು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಲಾಯಿತು. ಬಳಿಕ ಎಲ್ಲಾ ಆನೆಗಳು ಒಂದೊಂದಾಗಿ ಲಾರಿ ಏರಿ ಹೊರಟವು.