Delhi: 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; ಕೇಂದ್ರ ಸರ್ಕಾರ ಎಚ್ಚರಿಕೆ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಿಡ್ನಿ ಸಂಬಂಧಿತ ತೊಂದರೆಗಳಿಂದಾಗಿ 11 ಮಕ್ಕಳು ಸಾವನ್ನಪ್ಪಿದ್ದು, ಕೆಮ್ಮಿನ ಸಿರಪ್ ಸೇವಿಸಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಶಿಫಾರಸು ಮಾಡಿದೆ.

ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ ಕೆಮ್ಮಿನ ಸಿರಪ್ ನೀಡುವಂತೆ ಸೂಚಿಸಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇದುವರೆಗೆ 11 ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿದ ಮೇಲೆ ಸಾವನ್ನಪ್ಪಿದ್ದಾರೆ. ಇದು ತೀವ್ರ ಕಳವಳವನ್ನುಂಟುಮಾಡಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಶೀತ, ಕೆಮ್ಮು ಔಷಧಿಗಳನ್ನು ಸೇವಿಸಿದ ಕೆಲವು ದಿನಗಳ ನಂತರ ಮಕ್ಕಳು ಮೂತ್ರಪಿಂಡದ ಸಮಸ್ಯೆಗಳನ್ನು ಅನುಭವಿಸಿದ್ದರು.

ಕೆಮ್ಮಿನ ಸಿರಪ್ ಮಾದರಿಗಳ ಪರೀಕ್ಷೆಗಳು “ಡೈಥಿಲೀನ್ ಗ್ಲೈಕಾಲ್ (DEG) ಅಥವಾ ಎಥಿಲೀನ್ ಗ್ಲೈಕಾಲ್ (EG)” ಅನ್ನು ಒಳಗೊಂಡಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಗಂಭೀರವಾದ ಕಿಡ್ನಿ ಸಮಸ್ಯೆಯನ್ನು ಉಂಟುಮಾಡುವ ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ.

ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ತಾವಾಗಿಯೇ ಗುಣಮುಖರಾಗುತ್ತಾರೆ. ಅವರಿಗೆ ಔಷಧಿಗಳ ಅಗತ್ಯವಿಲ್ಲ. 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಸಿರಪ್ ಅನ್ನು ನೀಡಬಾರದು.  ಈ ಸಿರಪ್ಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವುದಿಲ್ಲ. ವೈದ್ಯರು ಪರೀಕ್ಷೆಯ ನಂತರ ಅಗತ್ಯವೆಂದು ಸೂಚಿಸಿದರೆ ಮಾತ್ರ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಔಷಧಿಗಳನ್ನು ನೀಡಬೇಕು. ಇದನ್ನು ಕಡಿಮೆ ಪ್ರಮಾಣದಲ್ಲಿ, ಅಲ್ಪಾವಧಿಗೆ ನೀಡಬೇಕು. ಮಕ್ಕಳ ವಿಶ್ರಾಂತಿ ಮತ್ತು ಆರೈಕೆಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ. 

ಕೇಂದ್ರ ಆರೋಗ್ಯ ಇಲಾಖೆ, ನ್ಯಾಷನಲ್ ಸೆಂಟರ್ ಫಾರ್ ಡೀಸೀಸ್ ಕಂಟ್ರೋಲ್ ( NCDC), NIV, ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಜಂಟಿಯಾಗಿ ತನಿಖೆ ನಡೆಸುತ್ತಿದೆ. ಮಕ್ಕಳ ಸಾವಿನ ಕುರಿತು ವೈದ್ಯಕೀಯ ವರದಿಗಳನ್ನು ಮುಂದಿಟ್ಟು ವೈದ್ಯರ ತಂಡ ಮಹತ್ವದ ಚರ್ಚೆ ನಡೆಸಿದೆ. ಎಲ್ಲಾ ರಾಜ್ಯಗಳ ಆರೋಗ್ಯ ಕೇಂದ್ರಗಳು ಈ ಕುರಿತು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

Rakesh arundi

Leave a Reply

Your email address will not be published. Required fields are marked *