Fire Accident: ಬೆಂಗಳೂರಿನಲ್ಲಿ ಅಗ್ನಿಅವಘಡ; 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಕರಕಲು
ಕನಕಪುರ ಮುಖ್ಯ ರಸ್ತೆಯ ಯೆಲಚೇನಹಳ್ಳಿಯಲ್ಲಿರುವ ಮೂರು ಅಂತಸ್ತಿನ ಕಮರ್ಷಿಯಲ್ ಕಟ್ಟಡದ ನೆಲಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 19 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿವೆ.
ಮೆಟ್ರೋ ನಿಲ್ದಾಣದ ಬಳಿಯ ಕಮರ್ಷಿಯಲ್ ಕಟ್ಟಡದ ನೆಲಮಹಡಿಯಲ್ಲಿ ಸ್ಥಾಪಿಸಲಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾರ್ಜಿಂಗ್ ವೇಳೆ ಓವರ್‌ಹೀಟ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ಗ್ಯಾಸ್ ಲೈನ್‌ಗೂ ಬೆಂಕಿ ವ್ಯಾಪಿಸಿದೆ. ಈ ವೇಳೆ ಒಂದು ಸಿಲಿಂಡರ್ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಅಗ್ನಿ ದುರಂತ ಸಂಭವಿಸಿದೆ.
ಈ ದುರಂತದಲ್ಲಿ ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾಗಿದ್ದ 19 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿವೆ. ಈ ವೇಳೆ ಆರು ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ವಾಹನ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಘಟನೆ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಇದರಿಂದ ಯಾರಿಗೂ ಏನೂ ಆಗಿಲ್ಲ. ನೆಲಮಾಳಿಗೆಯಲ್ಲಿನ ಹಾನಿಯನ್ನು ಹೊರತುಪಡಿಸಿ, ಇತರ ಮೂರು ಮಹಡಿಗಳಲ್ಲಿ ಯಾವುದೂ ಪರಿಣಾಮ ಬೀರಿಲ್ಲ. ಈ ಘಟನೆಯ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.