Kolar: ಕೋಲಾರದಲ್ಲಿ ನಕಲಿ ವೈದ್ಯನ ಎಡವಟ್ಟಿಗೆ ಪ್ರಾಣಬಿಟ್ಟ 8 ವರ್ಷದ ಬಾಲಕಿಯ ಜೀವ!
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಕಲಿ ವೈದ್ಯರು ಹೆಚ್ಚಗುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಂತದೊಂದು ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಮಾಲೂರಿನಲ್ಲಿರುವ ನಕಲಿ ಕ್ಲಿನಿಕ್ನ ವೈದ್ಯನ ಯಡವಟ್ಟಿನಿಂದಾಗಿ 8 ವರ್ಷದ ಬಾಲಕಿ ತೀವ್ರವಾಗಿ ನರಳಾಡಿ ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಆಕ್ರೋಶಗೊಂಡಿರುವ ಪೋಷಕರು ನಕಲಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಲೂರು ತಾಲೂಕಿನ ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿಯೊಬ್ಬಳು ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಿನಿಕ್ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಗೆ ಚಿಕತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದ್ದು, ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ರಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದನ್ನು ಗಮನಿಸಿದ ಪೋಷಕರು ಬುಧವಾರ ಸಂಜೆ ಮಾಲೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ನೀಡಿದ ಚಿಕಿತ್ಸೆ ಫಲಕಾರಿಯಾಗದೆ, ಗುರುವಾರ ಸಂಜೆ ರಕ್ತದ ವಾಂತಿ ಮಾಡಿ ಬಾಲಕಿ ತಾನವಿ ಸಾವನ್ನಪ್ಪಿದ್ದಾಳೆ. ನಕಲಿ ವೈದ್ಯ ನೀಡಿದ ಇಂಜೆಕ್ಷನ್ನಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ಪೋಷಕರು ದುಃಖತಪ್ತವಾಗಿ ಆರೋಪಿಸಿದ್ದಾರೆ.