D.K Shivakumar: ಅನ್ನಭಾಗ್ಯ ಅಕ್ಕಿ ದುರ್ಬಳಕೆ ತಡೆಗೆ ಆಹಾರ ಕಿಟ್ ನೀಡಲು ಹೊಸ ಪ್ಲಾನ್..!

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳು ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಯೋಜನೆಗಳಲ್ಲಿ ಕೆಲ ಬದಲಾವಣೆ ತರಲು ಚಿಂತನೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾದರೆ, ಶಕ್ತಿ ಯೋಜನೆಯಲ್ಲಿ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಸಾರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಂತಹ ಕೆಲವು ಪ್ರಕರಣಗಳನ್ನು ಪರಿಶೀಲನೆ ಮಾಡುತ್ತಿದ್ದು, ಕೆಲವೊಂದು ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ ದಾರರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಆದರೆ ಈಗ ಅದರಲ್ಲಿ ಕಡಿತಗೊಳಿಸಿ, ಕೇವಲ 5 ಕೆ.ಜಿ ನೀಡಲು ಮುಂದಾಗಿದೆ. ಹೆಚ್ಚುವರಿ ನೀಡುತ್ತಿರುವ 5 ಕೆ.ಜಿ ಅಕ್ಕಿಯ ಬದಲು ಪೌಷ್ಟಿ ಕಾಂಶವುಳ್ಳ ಆಹಾರ ಪದಾರ್ಥಗಳನ್ನೊಳಗೊಂಡ ಇಂದಿರಾ ಆಹಾರ ಕಿಟ್ ಹೆಸರಲ್ಲಿ ಫುಡ್ ಕಿಟ್ ನೀಡಲು ಸರ್ಕಾರ ಆಲೋಚಿಸಿದೆ. ಶೀಘ್ರದಲ್ಲಿಯೇ ಈ ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿವೆ.

ಅಕ್ಕಿ ದುರ್ಬಳಕೆ ತಡೆಗೆ ಕ್ರಮ

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಹತ್ತು ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. ಬಹಳಷ್ಟು ಕುಟುಂಬಗಳಿಗೆ ಆಗಿ ಉಳಿದ ಹೆಚ್ಚುವರಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಈ ದುರ್ಬಳಕೆ ತಡೆಗೆ ಸರ್ಕಾರ ಆಹಾರ ಕಿಟ್ ಯೋಜನೆ ತರಲು ಮುಂದಾಗಿದೆ.

ಅನ್ನಭಾಗ್ಯದ ಅಕ್ಕಿ ಕಳ್ಳ ಸಾಗಣೆ ಆರೋಪ ಕೇಳಿಬರುತ್ತಿದೆ. ವಿದೇಶಕ್ಕೂ ರಫ್ತಾಗುತ್ತಿದೆ ಎಂದು ಪತ್ರಿಕೆಯಲ್ಲಿ ಓದಿದ್ದೆ. ಹೀಗಾಗಿ ಫಲಾನುಭವಿ ಮಹಿಳೆಯೊಬ್ಬರನ್ನು ಪ್ರತಿ ತಿಂಗಳು ಎಷ್ಟು ಅಕ್ಕಿ ಉಳಿಯುತ್ತದೆ ಎಂದು ವಿಚಾರಿಸಿದೆ. ತಿಂಗಳಲ್ಲಿ ಅರ್ಧ ಡಬ್ಬ ಉಳಿಯುತ್ತದೆ ಎಂದು ಹೇಳಿದರು. ನಮ್ಮ ಭಾಗದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಚಪಾತಿ, ರೊಟ್ಟಿ ಸೇವಿಸುತ್ತಾರೆ. ಹೀಗಾಗಿ ಇಲ್ಲಿ ಅಕ್ಕಿ ಬಳಕೆ ಕಡಿಮೆಯಿರುತ್ತದೆ. ಆದ್ದರಿಂದ, ಜನರಲ್ಲಿ ಉಳಿಯುವ ಹೆಚ್ಚುವರಿ ಅಕ್ಕಿ ಕಾಳಸಂತೆ, ಹೋಟೆಲ್ ಪಾಲಾಗುವುದನ್ನು ತಪ್ಪಿಸಲು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಒಂದಷ್ಟು ರಾಜ್ಯಗಳಲ್ಲಿ ವುಡ್ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳು ಇರುತ್ತವೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ಚಿಂತನೆ ಇದೆ,” ಎಂದು ಹೇಳಿದ್ದರು.

ಶಕ್ತಿ ಯೋಜನೆಗೂ ನಿಯಮಗಳು

ಶಕ್ತಿ ಯೋಜನೆ ಕೂಡ ದುರುಪಯೋಗವಾಗುತ್ತಿದೆ ಅನ್ನುವ ಆರೋಪ ಕೇಳಿಬರುತ್ತಿವೆ. ಒಂದಷ್ಟು ಜನ ಸರ್ಕಾರ ನೌಕರರು ಸಹ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅನುಕೂಲಸ್ಥರು ಸಹ ಗ್ಯಾರಂಟಿ ಯೋಜನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಜನ ಅನೇಕ ಸಲಹೆ ನೀಡಿದ್ದಾರೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದಿದ್ದಾರೆ.

ಕಿಟ್‌ನಲ್ಲಿ ಏನೇನಿರುತ್ತೆ?

  • ಸಕ್ಕರೆ-1 ಕೆ.ಜಿ
  • ಉಪ್ಪು-1 ಕೆ.ಜಿ
  • ತೊಗರಿ ಬೇಳೆ- 1ಕೆ-.ಜಿ
  • ಅಡುಗೆ ಎಣ್ಣೆ- 1 ಲೀಟರ್
  • ಟೀ ಪುಡಿ-100
  • ಕಾಫಿ ಪುಡಿ100
  • ಗೋಧಿ-2 ಕೆ.ಜಿ

Rakesh arundi

Leave a Reply

Your email address will not be published. Required fields are marked *