Kalpana: ನಾಟಕದಲ್ಲಿ ಡೈಲಾಗ್ ಮಿಸ್ ಮಾಡಿದ್ದಕ್ಕೆ ಕಪಾಳಮೋಕ್ಷ, 56 ನಿದ್ದೆ ಮಾತ್ರೆ ನುಂಗಿ ಕಲ್ಪನಾ ಆತ್ಮಹತ್ಯೆ

ಕನ್ನಡ ಚಿತ್ರರಂಗ ಕಂಡ ಅಪರೂಪದ ತಾರೆ ಕಲ್ಪನಾ. ‘ಮಿನುಗು ತಾರೆ’ ಎಂಬ ಖ್ಯಾತಿಯನ್ನು ಹೊಂದಿದ್ದ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರಾದ ಕಲ್ಪನಾ ಬದುಕಿದ್ದು ಕೇವಲ 36 ವರ್ಷ. ಅವರ 15 ವರ್ಷಗಳ ಸಿನಿ ಬದುಕಿನಲ್ಲಿ 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದರು.

18 ಜುಲೈ 1943 ರಂದು ಅಂದಿನ ಮದ್ರಾಸ್ ಪ್ರಾಂತ್ಯ ಹಾಗೂ ಇಂದಿನ ಮಂಗಳೂರಿನಲ್ಲಿ ಜನಿಸಿದ ಕಲ್ಪನಾ ಮೊದಲು ಬಣ್ಣ ಹಚ್ಚಿದ್ದು ನಾಟಕಗಳಲ್ಲಿ. ನಾಟಕಗಳಲ್ಲಿ ಬಣ್ಣ ಹಚ್ಚಿ ನಟನೆಯ ಪಟ್ಟುಗಳನ್ನು ಕಲಿತ ಕಲ್ಪನಾ ಮುಂದೆ ‘ಸಾಕು ಮಗಳು’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ನಟಿ ಕಲ್ಪನಾ ತಮ್ಮ ಅತ್ಯದ್ಭುತ ಅಭಿನಯದಿಂದ ಜನಮನ ಸೂರೆಗೊಂಡು ದಿನದಿನಕ್ಕೂ ಬೆಳೆಯುತ್ತಲೇ ಹೋದರು. ಅವರು ಗ್ರಾಫ್ ಅದೆಷ್ಟು ಬೇಗ ಬೆಳೆಯಿತು ಎಂದರೆ, ಅವರಿಗೆ ಜನರು ‘ಮಿನುಗು ತಾರೆ’ ಎಂಬ ಬಿರುದನ್ನು ದಯಪಾಲಿಸಿದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಮಿನುಗು ತಾರೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಜೀವ ಬಿಟ್ಟರು.

ಗಟ್ಟಿಗಿತ್ತಿಯಾಗಿದ್ದ ಕಲ್ಪನಾ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಇನ್ನು ನಿಗೂಢವಾಗಿಯೇ ಇದೆ. ಆಕೆ ತಾನಾಗಿಯೇ ಸಾವಿಗೆ ಶರಣಾಗಿರಬಹುದು. ಆದರೆ ಅಂತಾದೊಂದು ದುಡುಕಿನ ನಿರ್ಧಾರ ಕೈಗೊಳ್ಳಲು ಕಾರಣವೇನು ಎನ್ನುವುದು ಮಾತ್ರ ಉತ್ತರ ಸಿಗದ ಪ್ರಶ್ನೆ. ಆಕೆಗೆ ಆಪ್ತರಾಗಿದ್ದವರಿಗೆ ಕೂಡ ಈ ಬಗ್ಗೆ ಬಹಳ ಗೊಂದಲವಿದೆ. ಒಟ್ಟಾರೆ ಕಲ್ಪನಾ ಹೀಗೆ ಬಂದು ಹಾಗೆ ಹೋಗಿಬಿಟ್ಟರು. ಕೆಲ ದುರಂತ ಪಾತ್ರಗಳಲ್ಲಿ ನಟಿಸಿದ್ದ ಆಕೆಯ ಬದುಕು ಕೂಡ ಅದೇರೀತಿ ಅಂತ್ಯವಾಗಿದ್ದು ವಿಪರ್ಯಾಸ.

ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ ಹಾಗೂ ಪ್ರೇಮ ವೈಫಲ್ಯದಿಂದ ನರಳುತ್ತಿದ್ದ ನಟಿ ಕಲ್ಪನಾ 1979 ಮೇ 12 ರಂದು ಬೆಳಗಾವಿಯ ಸಂಕೇಶ್ವರ ಹತ್ತಿರದ ಐಬಿಯಲ್ಲಿ ನಿಧನರಾಗಿದ್ದರು. 56 ನಿದ್ದೆ ಮಾತ್ರೆಗಳನ್ನು ನುಂಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ಬಹು ಬೇಡಿಕೆ ನಟಿಯಾಗಿದ್ದ ಕಲ್ಪನಾಗೆ 1977ರ ಹೊತ್ತಿಗೆ ಅವಕಾಶಗಳು ಕಮ್ಮಿಯಾಗತೊಡಗಿತು. ಕಡ್ಡಿ ತುಂಡಾದಂತೆ ಮಾತಾನಾಡುತ್ತಿದ್ದ ಕಲ್ಪನಾ ಅವರ ಸ್ವಭಾವವನ್ನು ಅಹಂಕಾರ, ದುರಂಹಕಾರ ಎಂದು ಕೆಲವರು ಭಾವಿಸಿದ್ದರು. ಆ ವರ್ಷ ಅವಕಾಶಗಳು ಕಮ್ಮಿ ಆಗಿ ಮತ್ತೆ ನಾಟಕಗಳ ಕಡೆ ಕಲ್ಪನಾ ಮುಖ ಮಾಡಿದ್ದರು.

ಗುಡಿಗೇರಿ ಬಸವರಾಜ ಜೊತೆ ನಟಿಸುತ್ತಿದ್ದ ನಾಟಕಗಳು ಜನಮನ್ನಣೆ ಪಾತ್ರವಾಗುತ್ತಿತ್ತು. 1978ರ ಬಳಿಕ ಸಿನಿಮಾ ಅವಕಾಶ ಸಿಗಲಿಲ್ಲ. ಅದೇ ಸಮಯದಲ್ಲಿ ಆರ್ಥಿಕ ಸಂಕಷ್ಟ ಸೇರಿ ನಾನಾ ರೀತಿ ನೋವು ಎದುರಿಸುವಂತಾಗಿತ್ತು. ನಿಧಾನವಾಗಿ ಆಕೆ ಖಿನ್ನತೆಗೆ ಜಾರಿ ನಿದ್ರೆ ಮಾತ್ರೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಅದೊಂದು ದಿನ ನಾಟಕದ ವೇಳೆ ವೇದಿಕೆ ಮೇಲೆ ನಡೆದ ಘಟನೆ ಆಕೆಯನ್ನು ಬಹಳವಾಗಿ ನೋಯಿಸಿತ್ತು.

ಕಲ್ಪನಾ ಸಾಯುವ ಹಿಂದಿನ ದಿನ ಬೆಳಗಾವಿ ಬಳಿಯ ಸಂಕೇಶ್ವರದಲ್ಲಿ ನಾಟಕವಿತ್ತು. ಅದು ‘ಕುಮಾರ ರಾಮ’ ನಾಟಕ. ಅಂದಿನ ನಾಟಕದಲ್ಲಿ ಕಲ್ಪನಾ ಮತ್ತು ಗುಡಗೇರಿ ಬಸವರಾಜ್ ತಾಯಿ-ಮಗನ ಪಾತ್ರದಲ್ಲಿ ನಟಿಸಿದ್ದರು. ಹಾಲು ಕುಡಿ ರಾಮ ಅಂತ ಹೇಳುವ ಬದಲು ಹುಲ್ಲು ಕುಡಿ ರಾಮ ಎಂದು ಕಲ್ಪನಾ ಡೈಲಾಗ್ ತಪ್ಪು ಹೇಳಿದರು.

ಕಲ್ಪನಾ ಡೈಲಾಗ್ ಕೇಳಿ ನಾಟಕ ನೋಡುತ್ತಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಕೂಡಲೇ ಬಸವರಾಜು ಕೋಪದಿಂದ ನಾನು ಹುಲ್ಲು ಕುಡಿಬೇಕಾ ಎಂದು ರಂಗದ ಮೇಲೆ ಕೂಗಾಡಿದ್ದರು. ಜನರ ಕೇಕೆ ಜೋರಾಗಿಬಿಟ್ಟಿತ್ತು. ಅವಮಾನದಿಂದ ಬಸವರಾಜು ಬ್ಯಾಕ್‌ಸ್ಟೇಜ್‌ಗೆ ಹೋಗಿ ಬಿಡುತ್ತಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗಿ, ಬಸವರಾಜು, ನಟಿ ಕಲ್ಪನಾ ಕೆನ್ನೆಗೆ ಹೊಡೆದುಬಿಟ್ಟಿದ್ದರು. ನಾಟಕ ನಡೆಯುತ್ತಿದ್ದ ಜಾಗದಿಂದ ವೇಷ ಸಹ ಬದಲಿಸದೇ ಕಲ್ಪನಾ ತಾವು ಉಳಿದುಕೊಂಡಿದ್ದ ಗೋಟೂರು ಐಬಿಗೆ ಹೋಗಿದ್ದರು. ಬೆಳಗ್ಗೆ ಕಲ್ಪನಾ ಇನ್ನಿಲ್ಲ ಎಂಬ ವಿಷಯ ಗೊತ್ತಾಗಿತ್ತು.

Rakesh arundi

Leave a Reply

Your email address will not be published. Required fields are marked *